ಉದಯವಾಹಿನಿ, ಜಾರ್ಜಿಯಾ: ಸುಳ್ಳು ಅಪಹರಣ ಆರೋಪದಲ್ಲಿ ಯುಎಸ್ (US) ನಲ್ಲಿ ಬಂಧನಕ್ಕೆ ಒಳಗಾಗಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಾವು ಜೈಲಿನಲ್ಲಿ ಅನುಭವಿಸಿದ ಕಿರಿಕಿರಿಯನ್ನು ಹೇಳಿಕೊಂಡಿದ್ದು, ಕಾನೂನು ಜಾರಿ ಸಂಸ್ಥೆಗಳು ಸಾರ್ವಜನಿಕವಾಗಿ ತಮ್ಮ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಜಾರ್ಜಿಯಾ ವಾಲ್‌ಮಾರ್ಟ್‌ನಲ್ಲಿ ಸುಳ್ಳು ಅಪಹರಣ ಆರೋಪದಿಂದ ಭಾರತೀಯ ಮೂಲದ ಮಹೇಂದ್ರ ಪಟೇಲ್ 47 ದಿನಗಳ ಸೆರೆಮನೆ ವಾಸವನ್ನು ಅನುಭವಿಸಿದರು. ಕಾಬ್ ಕೌಂಟಿ ಜೈಲಿನಲ್ಲಿದ್ದ (Cobb County jail) ಅವರು ತಾವು ಜೈಲಿನಲ್ಲಿ ಅನುಭವಿಸಿದ ತೀವ್ರ ಕಷ್ಟಕರವಾದ ಅನುಭವವನ್ನು ಹೇಳಿಕೊಂಡಿದ್ದಾರೆ.
ಸುಳ್ಳು ಅಪಹರಣ ಆರೋಪದಲ್ಲಿ ಮಹೇಂದ್ರ ಪಟೇಲ್ 47 ದಿನಗಳ ಕಾಲ ಕಾಬ್ ಕೌಂಟಿ ಜೈಲಿನಲ್ಲಿದ್ದರು. ಇದಕ್ಕಾಗಿ ಈಗ ಅವರು ಜಾರ್ಜಿಯಾದ ಕಾನೂನು ಜಾರಿ ಸಂಸ್ಥೆಗಳು ತಮ್ಮ ಬಳಿ ಸಾರ್ವಜನಿಕ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಜಾರ್ಜಿಯಾ ವಾಲ್‌ಮಾರ್ಟ್‌ನಲ್ಲಿ 2 ವರ್ಷದ ಮಗನನ್ನು ತನ್ನಿಂದ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ತಾಯಿಯೊಬ್ಬಳು ಆರೋಪಿಸಿದ ಅನಂತರ ಮಹೇಂದ್ರ ಪಟೇಲ್ ಅವರನ್ನು ಬಂಧಿಸಲಾಗಿತ್ತು. ಏಪ್ರಿಲ್ 3ರಂದು ಅವರ ಮೇಲೆ ದೋಷಾರೋಪಣೆ ಮಾಡಲಾಯಿತು. ಬಳಿಕ ಪಟೇಲ್ ಅವರನ್ನು 47 ದಿನಗಳ ಕಾಲ ಕಾಬ್ ಕೌಂಟಿ ಜೈಲಿನಲ್ಲಿ ಬಂಧನದಲ್ಲಿ ಇರಿಸಲಾಗಿತ್ತು.
ಇದೀಗ ಅವರ ವಿರುದ್ಧ ಆರೋಪ ಸುಳ್ಳೆಂದು ಸಾಬೀತಾಗಿದ್ದು, ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಜೈಲುವಾಸದ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡ ಪಟೇಲ್, ತಾವು ಸಸ್ಯಾಹಾರಿಯಾಗಿದ್ದರಿಂದ ಕೇವಲ ಬ್ರೆಡ್, ಕಡಲೆಕಾಯಿ ಬೆಣ್ಣೆ ಮತ್ತು ಹಾಲು ಸೇವಿಸಿ ಬದುಕುತ್ತಿದ್ದೆ. ಇತರ ಕೈದಿಗಳು ಬೆದರಿಕೆ ಹಾಕುತ್ತಿದ್ದು, ಭಯದಿಂದಲೇ ಇರಬೇಕಿತ್ತು ಎಂದು ತಿಳಿಸಿದ್ದಾರೆ.
