ಉದಯವಾಹಿನಿ, ಬೆಂಗಳೂರು: ಭೀಕರ ಕಾಲ್ತುಳಿತದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕ್ರಿಕೆಟ್ ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿರುವುದರ ನಡುವೆಯೇ ನಗರಕ್ಕೆ ಈಗ ‘ಫುಟ್ಬಾಲ್’ ಕೂಡಾ ಶಾಕ್ ನೀಡಿದೆ. ಇಲ್ಲಿನ ಮತ್ತೊಂದು ಪ್ರತಿಷ್ಠಿತ ಕ್ರೀಡಾಂಗಣ ಕಂಠೀರವದ ಪಿಚ್ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಯೋಗ್ಯವಲ್ಲ ಎಂದು ಏಷ್ಯನ್ ಫುಟ್ಬಾಲ್ ಫೆಡರೇಶನ್ (ಎಎಫ್‌ಸಿ) ಹೇಳಿದ್ದು, ಹೀಗಾಗಿ ಭಾರತ ಆಡಬೇಕಿದ್ದ ಫುಟ್ಬಾಲ್ ಪಂದ್ಯವೇ ಬೆಂಗಳೂರಿನಿಂದ ಎತ್ತಂಗಡಿ ಯಾಗಿದೆ. 2027ರ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಪಂದ್ಯದಲ್ಲಿ ಅಕ್ಟೋಬರ್ 14ರಂದು ಭಾರತ ತಂಡ ಸಿಂಗಾಪುರ ವಿರುದ್ದ ಸೆಣಸಬೇಕಿತ್ತು.
ಈ ಪಂದ್ಯಕ್ಕೆ ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್ (ಎಐಎಫ್‌ಎಫ್) ಕಂಠೀರವ ಕ್ರೀಡಾಂಗಣವನ್ನು ಅಂತಿಮಗೊಳಿಸಿತ್ತು. ಆದರೆ ಪಂದ್ಯದ ಪೂರ್ವಭಾವಿಯಾಗಿ ಎಎಫ್‌ಸಿ ಅಧಿಕಾರಿಗಳು ಇತ್ತೀಚೆಗೆ ಕಂಠೀರವ ಕ್ರೀಡಾಂಗಣದಲ್ಲಿ ತಪಾಸಣೆ ನಡೆಸಿದ್ದು, ಹಲವು ಲೋಪ ದೋಷಗಳನ್ನು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಬದಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸುವಂತೆ ಎಐಎಫ್ ಎಫ್‌ಗೆ ಎಎಫ್‌ಸಿ ಸೂಚಿಸಿದೆ ಎಂದು ವರದಿಯಾಗಿದೆ. ಇದರಿಂದಾಗಿ ಪಂದ್ಯ ಗೋವಾ ಅಥವಾ ಶಿಲ್ಲಾಂಗ್‌ಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ.’ಕಂಠೀರವದ ಪಿಚ್ ಸಮರ್ಪಕವಾಗಿಲ್ಲ. ಕ್ರೀಡಾಂಗಣದ ಇತರ ಕೆಲ ಅಂಶಗಳು ಕೂಡಾ ಅಂ.ರಾ. ಪಂದ್ಯ ಆಯೋಜನೆಗೆ ಸೂಕ್ತವಾಗಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ. ಸಾಮಾನ್ಯವಾಗಿ ಬೆಂಗಳೂರು ಎಫ್‌ಸಿ ಕ್ಲಬ್ ಕಂಠೀರವ ಕ್ರೀಡಾಂಗಣದ ಮೇಲುಸ್ತುವಾರಿ ನೋಡಿಕೊಳ್ಳುತ್ತದೆ. ಆದರೆ ಸದ್ಯ ಐಎಸ್‌ಎಲ್ ಸ್ಥಗಿತಗೊಂಡಿದ್ದರಿಂದ ಕ್ರೀಡಾಂಗಣ ಅವ್ಯವಸ್ಥೆಯಿಂದ ಕೂಡಿದೆ ಎಂದು ಹೇಳಲಾಗುತ್ತಿದೆ.
ನಮ್ಮ ಕಂಠೀರವ ಕ್ರೀಡಾಂಗಣ ಮಲ್ಟಿ ಪರ್ಪಸ್ ಆಗಿ ಬಳಕೆಯಾಗುತ್ತಿದೆ. ಇದನ್ನು ರಾಜ್ಯ ಸರ್ಕಾರ ಹಾಗೂ ಬಿಎಫ್‌ಸಿ ನಿರ್ವಹಣೆ ಮಾಡುತ್ತಿದೆ. ಏಷ್ಯನ್ ಎಎಫ್‌ಸಿ ಮ್ಯಾಚ್ ಆಯೋಜನೆಯ ಬಗ್ಗೆ ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್ ದಿಢೀರ್ ಆಗಿ ತಿಳಿಸಿದೆ. ಆ ಸಮಯದಲ್ಲಿ ಬೇರೆ ವೇಳಾಪಟ್ಟಿ ನಿಗದಿಯಾಗಿರುವುದರಿಂದ ಇಲ್ಲಿ 2027ರ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಪಂದ್ಯ ಆಯೋಜನೆ ಸಾಧ್ಯವಾಗುತ್ತಿಲ್ಲ.
