ಉದಯವಾಹಿನಿ,ನವದೆಹಲಿ: ದೇಶದಲ್ಲಿ ಸತತ ಮೂರು ಲೋಕಸಭೆ ಚುನಾವಣೆಗಳಲ್ಲಿ ಸೋತ ನಂತರ ಕಾಂಗ್ರೆಸ್ ಹತಾಶೆಯಿಂದ ಕುದಿಯುತ್ತಿದ್ದು ಕೇಂದ್ರ ಸರ್ಕಾರ ತರುವ ಎಲ್ಲಾ ಮಸೂದೆಗಳು ಮತ್ತು ನಿರ್ಧಾರಗಳು ತಪ್ಪಾಗಿ ಕಾಣುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಡಾ.”ಮನಮೋಹನ್ ಸಿಂಗ್ ಅವರು ತರಲು ಉದ್ದೇಶಿಸಿದ್ದ ಸುಗ್ರೀವಾಜ್ಞೆ ಹರಿದು ಹಾಕಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ೩೦ ದಿನಗಳಿಗೂ ಹೆಚ್ಚು ಕಾಲ ಜೈಲಿನಲ್ಲಿರುವ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಕ್ಯಾಬಿನೆಟ್ ಸಚಿವರನ್ನು ಪದಚ್ಯುತಗೊಳಿಸುವ ಮಸೂದೆ ವಿರೋಧಿಸುವ ಯಾವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ೨೦೧೩ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಆರ್‍ಜೆಡಿಯ ಲಾಲು ಪ್ರಸಾದ್ ಯಾದವ್ ರಕ್ಷಿಸಲು ತಂದಿದ್ದ ಸುಗ್ರೀವಾಜ್ಞೆಯನ್ನು ರಾಹುಲ್ ಗಾಂಧಿ ‘ಹರಿದು’ ಹಾಕಿದ್ದರು ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.
“ಲಾಲು ಪ್ರಸಾದ್ ಅವರನ್ನು ರಕ್ಷಿಸಲು ಮನಮೋಹನ್ ಸಿಂಗ್ ತಂದ ಸುಗ್ರೀವಾಜ್ಞೆಯನ್ನು ರಾಹುಲ್ ಗಾಂಧಿ ಯಾಕೆ ಹರಿದು ಹಾಕಿದರು, ಆ ದಿನ ನೈತಿಕತೆ ಇದ್ದರೆ, ಈಗ ಏನಾಯಿತು ಎಂದು ಪ್ರಶ್ನಿಸಿದ ಅವರು ಸತತ ಮೂರು ಚುನಾವಣೆಗಳಲ್ಲಿ ಸೋತಿದ್ದೀರಿ ಎಂಬ ಕಾರಣಕ್ಕಾಗಿಯೇ ಎಂದಿದ್ದಾರೆ.
ನೈತಿಕತೆಯ ಮಾನದಂಡಗಳು ಚುನಾವಣೆಗಳಲ್ಲಿ ಗೆಲುವು ಅಥವಾ ಸೋಲಿನೊಂದಿಗೆ ಸಂಬಂಧ ಹೊಂದಿಲ್ಲ. ಅವು ಸೂರ್ಯ ಮತ್ತು ಚಂದ್ರನಂತೆ ಸ್ಥಿರವಾಗಿರಬೇಕು ಎಂದು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮೇವು ಹಗರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಶಿಕ್ಷೆ ವಿಧಿಸಿದ ನಂತರ, ಶಿಕ್ಷೆಗೊಳಗಾದ ಶಾಸಕರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳಲು ಸುಗ್ರೀವಾಜ್ಞೆಯು ಮೂರು ತಿಂಗಳ ಕಾಲಾವಕಾಶ ನೀಡಿತ್ತು ಶಿಕ್ಷೆಗೊಳಗಾದ ಸಂಸದರು ಮತ್ತು ಶಾಸಕರ ಅನರ್ಹತೆಯ ಕುರಿತು ಸುಪ್ರೀಂ ಕೋರ್ಟ್ ಆದೇಶ ರದ್ದುಗೊಳಿಸಿತು ಮತ್ತು ನಂತರ ಅದನ್ನು ಹಿಂಪಡೆಯಲಾಯಿತು ಎಂದರು.ಯಾವುದೇ ಪ್ರಧಾನಿ, ಮುಖ್ಯಮಂತ್ರಿ ಅಥವಾ ಸಚಿವರನ್ನು ಸತತ ೩೦ ದಿನಗಳ ಕಾಲ ಬಂಧನದಲ್ಲಿಡಲು ಉದ್ದೇಶಿಸಿರುವ ೨೦೨೫ ರ ಸಂವಿಧಾನ (೧೩೦ನೇ ತಿದ್ದುಪಡಿ) ಮಸೂದೆಯ ಅಡಿ ಈ ಸಾಂವಿಧಾನಿಕ ಹುದ್ದೆಗಳಲ್ಲಿರುವ ಯಾರಾದರೂ ಜೈಲಿನಿಂದ ಸರ್ಕಾರ ನಡೆಸುವುದು “ನ್ಯಾಯಯುತ”ವೇ ಎಂದು ಪ್ರಶ್ನಿಸಿದ್ದಾರೆ.
“ಈ ದೇಶದಲ್ಲಿ ಎನ್‌ಡಿಎ ಮುಖ್ಯ ಮಂತ್ರಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರಧಾನಿ ಕೂಡ ಎನ್‌ಡಿಎಯವರೇ. ಆದ್ದರಿಂದ ಈ ಮಸೂದೆಯು ವಿರೋಧ ಪಕ್ಷಗಳಿಗೆ ಮಾತ್ರ ಪ್ರಶ್ನೆಗಳನ್ನು ಎತ್ತುವುದಿಲ್ಲ. ಇದು ನಮ್ಮ ಮುಖ್ಯಮಂತ್ರಿಗಳಿಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದಿದ್ದಾರೆ. ೩೦ ದಿನಗಳವರೆಗೆ ಜಾಮೀನು ನೀಡುವ ಅವಕಾಶವಿದೆ. ನಕಲಿ ರೀತಿಯ ಪ್ರಕರಣವಾಗಿದ್ದರೆ, ದೇಶದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕಣ್ಣು ಮುಚ್ಚಿ ಕುಳಿತಿಲ್ಲ. ಯಾವುದೇ ಪ್ರಕರಣದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಜಾಮೀನು ನೀಡುವ ಹಕ್ಕನ್ನು ಹೊಂದಿವೆ. ಜಾಮೀನು ನೀಡದಿದ್ದರೆ, ಹುದ್ದೆ ತೊರೆಯಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರದ ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ ಅದರ ಬಗ್ಗೆ ಯಾವುದೇ ಪ್ರಶ್ನೆಯೇ ಇಲ್ಲ. ಆದರೆ ದೇಶದ ಪ್ರಧಾನಿ ಜೈಲಿಗೆ ಹೋದರೆ, ಪ್ರಧಾನಿ ಅಥವಾ ಮುಖ್ಯಮಂತ್ರಿ ಜೈಲಿನಿಂದ ಸರ್ಕಾರ ನಡೆಸುವುದು ಸರಿ ಎಂದು ನೀವು ಭಾವಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!