ಉದಯವಾಹಿನಿ, ಕಿಚ್ಚ ಸುದೀಪ್ ಹುಟ್ಟುಹಬ್ಬವೆಂದ್ರೆ ಅವರ ಅಭಿಮಾನಿಗಳು ವಾರದ ಮುಂಚೆಯೇ ವಿಧ ವಿಧವಾಗಿ ಪ್ಲ್ಯಾನ್‌ ಮಾಡಿಕೊಂಡಿರ್ತಾರೆ. ಈ ಸಲವೂ ಅವರ ಫ್ಯಾನ್ಸ್‌ ಹುಟ್ಟುಹಬ್ಬಕ್ಕಾಗಿ ಕಾದು ಕುಳಿತಿದ್ದರು. ಈ ವೇಳೆ ನಟ ಸುದೀಪ್ ಅವರ ಅಭಿಮಾನಿಗಳಿಗೆ ಪತ್ರದ ಮೂಲಕ ಹುಟ್ಟುಹಬ್ಬಕ್ಕೆ ಆಹ್ವಾನ ನೀಡಿದ್ದಾರೆ. ಜೊತೆಗೆ ಮನವಿಯನ್ನೂ ಮಾಡಿಕೊಂಡಿದ್ದಾರೆ.
ಸೆಪ್ಟಂಬರ್ 2 ಕಿಚ್ಚ ಸುದೀಪ್ ಹುಟ್ಟುಹಬ್ಬ, ಈ ವರ್ಷ 52ನೇ ವಸಂತಕ್ಕೆ ಕಾಲಿಡಲಿದ್ದಾರೆ ಕಿಚ್ಚ ಸುದೀಪ್. ತಮ್ಮ ಹುಟ್ಟುಹಬ್ಬದ ಆಚರಣೆಗಾಗಿ ಕಾಯುವ ಅಭಿಮಾನಿಗಳಿಗೆ ನಿರಾಸೆ ಮಾಡಲಾರೆ. ಆದ್ರೆ ಸೆಪ್ಟಂಬರ್‌ 2ಕ್ಕೆ ಅಲ್ಲ, ಬದಲಾಗಿ ಒಂದರ ರಾತ್ರಿಯೇ ಸಿಗೋಣವಾ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಜೊತೆಗೆ ಸೆ.2ರಂದು ಮನೆಯಲ್ಲಿ ಇರೊಲ್ಲ ಹಾಗಾಗಿ ಮನೆ ಬಳಿ ಬಂದು ಯಾರೂ ಕಾಯುವುದು, ಗಲಾಟೆ ಮಾಡೋದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.
ಸೆಪ್ಟಂಬರ್ 1ರ ರಾತ್ರಿ 12 ಗಂಟೆಗೆ ಗಡಿಯಾರದ ಶಬ್ದದ ಜೊತೆ ನಿಮ್ಮ ಶುಭಾಶಯಗಳೇ ನನ್ನ ಕಿವಿಗೆ ಕೇಳಬೇಕು. ಅವುಗಳೇ ಎದೆಗೆ ಇಳಿಯಬೇಕು. ಆದ್ದರಿಂದ ಸೆಪ್ಟಂಬರ್ 1ರ ರಾತ್ರಿ ನಾವೆಲ್ಲ ಒಂದು ಕಡೆ ಸೇರೋಣ. ಜಾಗ ಎಲ್ಲಿ, ಹೇಗೆ..? ಅನ್ನೋದನ್ನ ತಿಳಿಸುತ್ತೇನೆ. ಆದರೆ ಮಾರನೇ ದಿನ ಅಂದರೆ ಸೆಪ್ಟಂಬರ್ 2ರಂದು ನಾನು ಊರಿನಲ್ಲಿ ಇರುವುದಿಲ್ಲ. ಯಾರೂ ದಯವಿಟ್ಟು ಮನೆ ಹತ್ತಿರ ಬಂದು ಕಾಯುವುದು ಬೇಡ. ನಾನಿರುವುದಿಲ್ಲ ಎಂದು ಹೇಳಿದಮೇಲೂ ನೀವು ಮನೆ ಬಳಿ ಬಂದು ಕಾದರೆ ನನ್ನ ಮನಸ್ಸಿಗೆ ನೋವಾಗುತ್ತೆ. ಜೊತೆಗೆ ಈ ಸಲ ಅಮ್ಮನಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆ ಬಳಿ ಚೂರು ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ. ನನಗೆ ನಂಬಿಕೆ ಇದೆ, ನೀವು ನನ್ನನ್ನ ಅರ್ಥಮಾಡಿಕೊಳ್ಳುವಿರೆಂದು. ಅದು ಬಿಟ್ಟರೆ ಯಥಾಪ್ರಕಾರ ಪ್ರತಿವರ್ಷದಂತೆ ಈ ವರ್ಷವೂ ಸಾಮಾಜಿಕ ಕಾರ್ಯಗಳು ನಡೆಯಲಿವೆ. ನಿಮ್ಮ ಹಾರೈಕೆ, ಅಭಿಮಾನ, ಸಾಂಗತ್ಯವೇ ನನ್ನ ಬಹುದೊಡ್ಡ ಆಸ್ತಿ. ಎಂದು ಅಭಿಮಾನಿಗಳಿಗೆ ಸುದೀರ್ಘ ಪತ್ರ ಬರೆದಿದ್ದಾರೆ ನಟ ಕಿಚ್ಚ ಸುದೀಪ್.

Leave a Reply

Your email address will not be published. Required fields are marked *

error: Content is protected !!