ಉದಯವಾಹಿನಿ, ಬೆಂಗಳೂರು: ಇಂದಿನಿಂದ ಗ್ರೇಟರ್ ಬೆಂಗಳೂರು ಆಡಳಿತ ಜಾರಿಯಾಗಿದ್ದು, ಬೆಂಗಳೂರನ್ನು ಐದು ಪಾಲಿಕೆಗಳಾಗಿ ವಿಂಗಡಿಸಿ ಆಡಳಿತ ನಡೆಸಲಾಗುತ್ತದೆ.
ಸಿಲಿಕಾನ್ ಸಿಟಿ ಬೆಳೆಯುತ್ತಿರುವ ನಗರ. ಹೀಗಾಗಿ ಒಂದೇ ಸಂಸ್ಥೆಯಿಂದ ನಿರ್ವಹಣೆ ಕಷ್ಟ ಅಂತಾ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿ ಐದು ಪಾಲಿಕೆಗಳಾಗಿ ವಿಂಗಡಿಸಿ ಆಡಳಿತ ನಡೆಸೋದಕ್ಕೆ ಆದೇಶಿಸಿತ್ತು. ಅದರಂತೆ ಇಂದಿನಿಂದ (ಸೆ.2) ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ಜಾರಿ ಆಗಿದೆ. ಈ ಹಿಂದೆ ಬಿಬಿಎಂಪಿ ಇತ್ತು, ಆದರೆ ಇನ್ಮುಂದೆ ಗ್ರೇಟರ್ ಬೆಂಗಳೂರು ಆಡಳಿತ ಜಾರಿಯಲ್ಲಿರಲಿದೆ. ಈಗಾಗಲೇ ಐದು ಪಾಲಿಕೆಗಳಿಗೆ 10 ಕಚೇರಿಯನ್ನ ಗುರುತು ಮಾಡಲಾಗಿದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದು ಇತಿಹಾಸ ಪುಟ ಸೇರಲಿದೆ.
1949ರಲ್ಲಿ ಬೆಂಗಳೂರಿನಲ್ಲಿ ನಗರ ಸಭೆ ರೂಪುಗೊಂಡಿತ್ತು. ಆರ್.ಸುಬ್ಬಣ್ಣ ಮೊದಲ ಮೇಯರ್ ಆಗಿದ್ದರು. ಅಂದಿನಿಂದ 1995ರವರೆಗೆ ನಗರಸಭೆ ಆಡಳಿತ ಜಾರಿಯಲ್ಲಿತ್ತು.
ನಂತರ 1996ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ರಚನೆಯಾಗಿ 2006ರವರೆಗೆ ಆಡಳಿತ ನಡೆಸಿತ್ತು. ಬಳಿಕ ವ್ಯಾಪ್ತಿಯನ್ನು ಹಿರಿದಾಗಿಸಿ 2010ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚನೆಯಾಗಿತ್ತು. ಅಂದಿನಿಂದ 2025ರವರೆಗೆ ಬಿಬಿಎಂಪಿ (BBMP) ಆಡಳಿತ ನಡೆಸಿಕೊಂಡು ಬಂದಿದೆ. 2019-20ರಲ್ಲಿ ಮೇಯರ್ ಆದ ಎಂ.ಗೌತಮ್ ಕುಮಾರ್ ಬೆಂಗಳೂರಿನ ಏಕೀಕೃತ ಆಡಳಿತದ ಕೊನೆಯ ಮೇಯರ್ ಆಗಿದ್ದರು. ಇದೀಗ ಮಹಾನಗರ ಪಾಲಿಕೆಯನ್ನು 5 ನಗರಪಾಲಿಕೆಗಳನ್ನು ವಿಂಗಡಿಸಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ಆರಂಭವಾಗಿದೆ.
