ಉದಯವಾಹಿನಿ,ಹೈದರಾಬಾದ್: ನವದೆಹಲಿ: ಉತ್ತರ ಭಾರತದಾದ್ಯಂತ ಮಳೆಯಬ್ಬರ ಮುಂದುವರೆದಿದ್ದು, ಜನಜೀವನ ತತ್ತರಿಸಿ ಹೋಗಿದೆ. ಮೇಘಸ್ಫೋಟ, ಭೂಕುಸಿತ, ಪ್ರವಾಹದಿಂದಾಗಿ 100ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ಇನ್ನೂ ಹಲವರು ಕಾಣೆಯಾಗಿದ್ದಾರೆ. ಈ ಹಿನ್ನೆಲೆ ವಿಶೇಷ ಪ್ಯಾಕೇಜ್ ಘೋಷಿಸಲು ಕೇಂದ್ರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗ್ರಹಿಸಿದ್ದಾರೆ.
ಇತ್ತೀಚಿಗೆ ಉತ್ತರಾಖಂಡದಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ಉಂಟಾದ ಸರಣಿ ಮೇಘಸ್ಫೋಟ, ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದಾಗಿ 69 ಜನರು ಕಾಣೆಯಾಗಿದ್ದಾರೆ. ಹಲವು ಮನೆಗಳು ನಾಶವಾಗಿ ಪ್ರಾಣಿಗಳು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿವೆ. ಸದ್ಯ ಹವಾಮಾನ ಇಲಾಖೆ ಉತ್ತರಾಖಂಡಕ್ಕೆ ರೆಡ್ ಅಲರ್ಟ್ ಘೋಷಿಸಿದೆ.

ಕಳೆದ ಹದಿನೈದು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ ಹಾಗೂ ಹಠಾತ್ ಪ್ರವಾಹದಿಂದಾಗಿ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಜಮ್ಮು-ಶ್ರೀನಗರ ಹೆದ್ದಾರಿ ಕಳೆದ ಎಂಟು ದಿನಗಳಿಂದ ಬಂದ್ ಆಗಿದೆ. ಸೋಮವಾರ ಸುರಿದ ನಿರಂತರ ಮಳೆಯ ನಂತರ ರಾಜೌರಿ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಅಧಿಕಾರಿಗಳು 19 ಕುಟುಂಬಗಳನ್ನು ಸ್ಥಳಾಂತರಿಸಿದ್ದಾರೆ. ಇನ್ನೂ ದೋಡಾದಲ್ಲಿ ಮಳೆ ಮತ್ತು ಹಠಾತ್ ಪ್ರವಾಹದಿಂದಾಗಿ 500 ಮನೆಗಳಿಗೆ ಹಾನಿಯಾಗಿದೆ.

Leave a Reply

Your email address will not be published. Required fields are marked *

error: Content is protected !!