ಉದಯವಾಹಿನಿ, ಪಾಟ್ನಾ (ಬಿಹಾರ): ಸ್ಮಶಾನಕ್ಕೆ ತೆರಳಲು ದಾರಿ ಬಿಡದ ಹಿನ್ನೆಲೆಯಲ್ಲಿ, ಕುಟುಂಬವೊಂದು ರಸ್ತೆಯಲ್ಲೇ ವೃದ್ಧೆಯ ಅಂತ್ಯ ಸಂಸ್ಕಾರ ನೆರವೇರಿಸಿದೆ. ಬಿಹಾರದ ವೈಶಾಲಿ ಜಿಲ್ಲೆಯ ಗೋರೌಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹದ್ದೊಂದು ಅಮಾನವೀಯ ಘಟನೆ ನಡೆದಿದೆ.
91 ವರ್ಷದ ಮಹಾದಲಿತ (ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಕೆಳವರ್ಗ) ಮಹಿಳೆಯೊಬ್ಬರ ಅಂತ್ಯಕ್ರಿಯೆ ರಸ್ತೆಯಲ್ಲೇ ನಡೆದಿದೆ. ಮೃತರನ್ನು ಸೋಂಧೋ ವಾಸುದೇವ್ ಗ್ರಾಮದ ನಿವಾಸಿ ಝಾಪ್ಸಿ ದೇವಿ ಎಂದು ಗುರುತಿಸಲಾಗಿದೆ. ಇವರು ಮುಸಾಹರ್ (ಇಲಿ ತಿನ್ನುವ) ಸಮುದಾಯಕ್ಕೆ ಸೇರಿದವರು.
ಝಾಪ್ಸಿ ದೇವಿ ಅವರ ಕುಟುಂಬಸ್ಥರು ಹಾಗೂ ಸಂಬಂಧಿಕರು ಅಂತ್ಯಕ್ರಿಯೆಗಾಗಿ ಶವವನ್ನು ಗುರುವಾರ ಗ್ರಾಮದ ಸಮೀಪದ ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಮಾರುಕಟ್ಟೆಯ ಮುಖ್ಯ ರಸ್ತೆಯಿಂದ ಸ್ಮಶಾನಕ್ಕೆ ಹೋಗುವ ಮಾರ್ಗವನ್ನು ಸ್ಥಳೀಯ ಗ್ರಾಮಸ್ಥರು, ರೈತರು ಮತ್ತು ಅಂಗಡಿಯವರು ಅತಿಕ್ರಮಿಸಿದ್ದಾರೆ. ಅಲ್ಲದೆ, ಸ್ಮಶಾನಕ್ಕೆ ಹೊರಟಿದ್ದ ಅಂತಿಮ ಮೆರವಣಿಗೆಯನ್ನು ತಡೆದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹೀಗಾಗಿ, ಬೇರೆ ದಾರಿ ಕಾಣದೆ, ಅಲ್ಲಿನ ಶಿವ ದೇವಾಲಯದ ಮುಂಭಾಗದಲ್ಲಿರುವ ರಸ್ತೆಯಲ್ಲೇ ಚಿತೆಗೆ ಬೆಂಕಿ ಇಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
”ನನ್ನ ತಾಯಿಯ ಶವವನ್ನು ಅಂತ್ಯಕ್ರಿಯೆಗಾಗಿ ತೆಗೆದುಕೊಂಡು ಹೋಗುತ್ತಿದ್ದೆವು. ಆದರೆ ಸೋಂಧೋ ಅಂಧಾರಿ ಗಚ್ಚಿ ಚೌಕ್‌ನ ಜನರು ನಮ್ಮನ್ನು ತಡೆದರು. ಎಷ್ಟೇ ಬೇಡಿಕೊಂಡರೂ ಅವರು ನಮ್ಮ ಮನವಿಗೆ ಕಿಡಿಗೊಡಲಿಲ್ಲ. ಈ ಬಗ್ಗೆ ಸ್ಥಳೀಯ ಪಂಚಾಯತ್ ಮುಖ್ಯಸ್ಥ ಮತ್ತು ಗೋರೌಲ್ ಸ್ಟೇಷನ್ ಹೌಸ್ ಆಫೀಸರ್​​ಗೆ ಮಾಹಿತಿ ನೀಡಿದ್ದೇವೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರೂ ಬಂದರು. ಆದರೆ ನಮಗೆ ಯಾರೂ ನೆರವಾಗಲಿಲ್ಲ” ಎಂದು ಜಗದೀಶ್ ಮಾಂಝಿ ಅಳಲು ತೋಡಿಕೊಂಡರು.
”ನಮಗೆ ಬೇರೆ ದಾರಿ ಇರಲಿಲ್ಲ. ನಮ್ಮ ಸಮುದಾಯದ ಜನರೊಂದಿಗೆ ಈ ಬಗ್ಗೆ ಚರ್ಚಿಸಿದೆವು. ಅದಕ್ಕೆ ಅವರು ಮಾರುಕಟ್ಟೆಯಲ್ಲಿ ರಸ್ತೆಯಲ್ಲೇ ಅಂತಿಮ ವಿಧಿ ವಿಧಾನ ನಡೆಸುವಂತೆ ಸೂಚಿಸಿದರು. ಅದರಂತೆ ಅಂತ್ಯಕ್ರಿಯೆ ಮಾಡಿದೆವು. ಸ್ಮಶಾನಕ್ಕೆ ಹೋಗಲು ಸರ್ಕಾರವು ನಮಗೆ ಒಂದು ಮಾರ್ಗವನ್ನು ಒದಗಿಸಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಜಗದೀಶ್ ಆಗ್ರಹಿಸಿದರು.ಈ ಹಿಂದೆಯೂ ಸಹ ನಮಗೆ ಇದೇ ರೀತಿಯ ತೊಂದರೆ ಎದುರಾಗಿದೆ. ಈ ಪ್ರದೇಶದ ಜನರು ನಮ್ಮವರ ಅಂತ್ಯಕ್ರಿಯೆಯ ಮೆರವಣಿಗೆಗಳಿಗೆ ಈ ಮೊದಲೂ ಸಹ ತಡೆಯುತ್ತಿದ್ದರು ಎಂದು ಘಟನಾ ಸ್ಥಳದಲ್ಲಿದ್ದ ಮಹಾದಲಿತ ಸಮುದಾಯದ ಹಲವರು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!