ಉದಯವಾಹಿನಿ, ಛತ್ತೀಸ್‌ಗಢ: ಅಣೆಕಟ್ಟಿನ ಸಣ್ಣಭಾಗವೊಂದು ಕುಸಿದ ಪರಿಣಾಮ ಪ್ರವಾಹ ಉಂಟಾಗಿ ನಾಲ್ವರು ಸಾವನ್ನಪ್ಪಿರುವ ಘಟನೆ ಛತ್ತೀಸ್‌ಗಢದ \ ಬಲರಾಂಪುರ ಜಿಲ್ಲೆಯ ಲೂಟಿ ಜಲಾಶಯದಲ್ಲಿ ನಡೆದಿದೆ. ಬಲರಾಂಪುರ ಜಿಲ್ಲೆಯ ಧನೇಶ್‌ಪುರ್ ಗ್ರಾಮದಲ್ಲಿರುವ ಲೂಟಿ ಜಲಾಶಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಈ ಅವಘಡ ಸಂಭವಿಸಿದೆ. ಈ ವೇಳೆ ಅಣೆಕಟ್ಟು ಕುಸಿದು ಹಠಾತ್ ಪ್ರವಾಹ ಉಂಟಾಗಿದೆ. ಪರಿಣಾಮ ಕೊರ್ಕೊಮಾ ಗ್ರಾಮದ ನಿವಾಸಿಗಳಾದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಂಟಾದ ಪ್ರವಾಹದಿಂದಾಗಿ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ನುಗ್ಗಿ ಹಾನಿಗೊಳಗಾಗಿವೆ. 25ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಗ್ರಾಮಸ್ಥರ ಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಪ್ರವಾಹದ ರಭಸಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ತಂಡ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ನಾಪತ್ತೆಯಾದ ಮೂವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಜಿಲ್ಲಾಡಳಿತವು ತಾತ್ಕಾಲಿಕ ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದು, ಸಂತ್ರಸ್ತರಿಗೆ ಆಹಾರ, ಔಷಧಿ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸುತ್ತಿದೆ.
