ಉದಯವಾಹಿನಿ, ನವದೆಹಲಿ: ಲಡಾಖ್ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ ನರವಾಣೆ ಅವರ ಅಪ್ರಕಟಿತ ಪುಸ್ತಕ ವಿಚಾರವನ್ನು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದು, ಲೋಕಸಭೆಯಲ್ಲಿ ಭಾರೀ ಗದ್ದಲವನ್ನು ಸೃಷ್ಟಿಸಿದೆ.
ಸಂಸತ್‌ನಲ್ಲಿ ಸೋಮವಾರ ರಾಷ್ಟ್ರಪತಿಗಳ ಭಾಷಣಕ್ಕೆ ಸಂಬಂಧಿಸಿದಂತೆ ವಂದನಾ ನಿರ್ಣಯದ ಮೇಲಿನ ಚರ್ಚೆ ಕೈಗೆತ್ತಿಕೊಳ್ಳಲಾಯಿತು. ಈ ವೇಳೆ ರಾಹುಲ್ ಗಾಂಧಿ, ಡಿಸೆಂಬರ್ 2019 ರಿಂದ ಏಪ್ರಿಲ್ 2022 ರವರೆಗೆ ಭಾರತದ ಸೇನಾ ಮುಖ್ಯಸ್ಥರಾಗಿ ಎಂ ಎಂ ನರವಾಣೆ ಅವರು ಸೇವೆ ಸಲ್ಲಿಸಿದ್ದಾರೆ. ಅವರ ಕುರಿತಾದ ಪುಸ್ತಕ ಪ್ರಕಟಿಸಲು ಕೇಂದ್ರ ಅನುಮೋದನೆ ನೀಡಿಲ್ಲ.
2020ರ ಭಾರತ-ಚೀನಾ ಗಡಿ ಘರ್ಷಣೆಯ ಸಮಯದಲ್ಲಿನ ಮಹತ್ವದ ಅಂಶಗಳು ಪುಸ್ತಕದಲ್ಲಿವೆ. ಚೀನಾ ಆಕ್ರಮಣ, ಉಪಟಳವು ಅದರಲ್ಲಿದೆ. ಇಂತಹ ಪುಸ್ತಕದ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಸಂಸತ್‌ನಲ್ಲಿ ತಿಳಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ರಾಜನಾಥ್ ಸಿಂಗ್, ಅಪ್ರಕಟಿತ ವಿಷಯ ಸದನದಲ್ಲಿ ಉಲ್ಲೇಖ ಸರಿಯಲ್ಲ ಎಂದು ಹೇಳಿದರು. ಅವರ ಮಾತು ಬೆಂಬಲಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಿಸಿದರು. ಔಪಚಾರಿಕವಾಗಿ ಪ್ರಕಟಿತ ವಿಷಯವನ್ನು ಪ್ರಸ್ತಾಪಿಸುವಂತೆ ಒತ್ತಾಯಿಸಿದರು.
ಪತ್ರಿಕೆಗಳು ಮತ್ತು ಮ್ಯಾಗಜಿನ್‌ಗಳು ಏನು ಬೇಕಾದರೂ ಪ್ರಕಟಿಸಬಹುದು. ಅಧಿಕೃತವಾಗಿ ಪ್ರಕಟವಾಗದ ಮೂಲಗಳನ್ನು ಸಂಸತ್ತಿನ ದಾಖಲೆಯ ಭಾಗವಾಗಲು ಅವಕಾಶ ಕೊಡಬಾರದು ಎಂದು ಹೇಳಿದರು. ಇದರಿಂದ ಸದನದಲ್ಲಿ ಗದ್ದಲ ಹೆಚ್ಚಾಯಿತು. ವಿರೋಧ ಪಕ್ಷದ ಸದಸ್ಯರು, ಆಡಳಿತ ಪಕ್ಷವು ಉದ್ದೇಶಪೂರ್ವಕವಾಗಿ ಚರ್ಚೆಯನ್ನು ನಿಲ್ಲಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ, ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಅವರ ಮಧ್ಯಪ್ರವೇಶವನ್ನು ಖಂಡಿಸಿದರು.
