ಉದಯವಾಹಿನಿ, ದುಬೈ: ಹರಾರೆಯಲ್ಲಿ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಜಿಂಬಾಬ್ವೆ ತಂಡದ ಆಲ್ರೌಂಡರ್​ ಸಿಕಂದರ್​ ರಾಜಾ ಐಸಿಸಿ ಏಕದಿನ ಆಲ್‌ರೌಂಡರ್‌ಗಳ ನೂತನ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ರಾಜಾ 87 ಎಸೆತಗಳಲ್ಲಿ 92 ರನ್ ಗಳಿಸಿದರು. ಮತ್ತು ಎರಡನೇ ಪಂದ್ಯದಲ್ಲಿ ಅಜೇಯ 59 ರನ್ ಗಳಿಸಿದ್ದರು. ಈ ಪ್ರದರ್ಶನದಿಂದ 39 ವರ್ಷದ ರಾಜಾ, ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿಯೂ ಬಡ್ತಿ ಪಡೆದು, ಒಂಬತ್ತು ಸ್ಥಾನ ಏರಿಕೆ ಕಂಡು 22ನೇ ಸ್ಥಾನಕ್ಕೆ ತಲುಪಿದ್ದಾರೆ. ಪ್ರಸ್ತುತ 302 ರೇಟಿಂಗ್‌ ಅಂಕ ಪಡೆದು ರಾಜಾ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಈ ಹಿಂದೆ ಅಗ್ರಸ್ಥಾನಿಯಾಗಿದ್ದ ಅಫಘಾನಿಸ್ತಾನದ ಅಜ್ಮತುಲ್ಲಾ ಓಮರ್ಜಾಯಿ(296) ದ್ವಿತೀಯ ಸ್ಥಾನಕ್ಕೆ ಜಾರಿದ್ದಾರೆ.
ಬ್ಯಾಟಿಂಗ್‌ ಶ್ರೆಯಾಂಕದಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸಿಲ್ಲ. ಭಾರತದ ಶುಭಮನ್‌ ಗಿಲ್‌ ಮತ್ತು ರೋಹಿತ್‌ ಶರ್ಮ ಕ್ರಮವಾಗಿ ಅಗ್ರ ಎರಡು ಸ್ಥಾನದಲ್ಲೇ ಮುಂದುವರಿದಿದ್ದಾರೆ. ವಿರಾಟ್‌ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಏತನ್ಮಧ್ಯೆ, ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದ ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ತಮ್ಮ ರೇಟಿಂಗ್‌ ಅಂಕವನ್ನು ಹೆಚ್ಚಿಸಿಕೊಂಡು ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಭಾರತದ ಕುಲ್‌ದೀಪ್‌ ಯಾದವ್‌ 650 ರೇಟಿಂಗ್‌ ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!