ಉದಯವಾಹಿನಿ, ಕಲಬುರಗಿ: ಗಣೇಶ ವಿಸರ್ಜನಾ ಮೆರವಣಿಗೆಗೆ ಭದ್ರತೆಗಾಗಿ ತೆರಳಿದ್ದ ಪೊಲೀಸ್ ಪೇದೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವುದು ಸೇಡಂನ ಮಳಖೇಡದಲ್ಲಿ ನಡೆದಿದೆ. ಮೃತರನ್ನು ಮಳಖೇಡ ಪೊಲೀಸ್ ಠಾಣೆಯ ಮುಖ್ಯಪೇದೆ ಮನೋಹರ್ ಪವಾರ್ (46) ಎಂದು ಗುರುತಿಸಲಾಗಿದೆ. ಅವರಿಗೆ ಕರ್ತವ್ಯದ ವೇಳೆಯೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಅಂಬುಲೇನ್ಸ್‍ನಲ್ಲಿ ಕಲಬುರಗಿ ಆಸ್ಪತ್ರೆಗೆ ಕರೆದೊಯ್ಯುವ ಯತ್ನ ಮಾಡಲಾಯಿತು. ಆದರೆ ಮಾರ್ಗ ಮಧ್ಯೆಯೆ ಅವರು ಸಾವನ್ನಪ್ಪಿದ್ದಾರೆ.
ಮಳಖೇಡ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಸುತ್ತಿದ್ದ ಮನೋಹರ್ ಸಾವಿಗೆ ಸಹೋದ್ಯೋಗಿಗಳು ಹಾಗೂ ಆತ್ಮೀಯರು ಕಂಬನಿ ಮಿಡಿದಿದ್ದಾರೆ. ಹಿರಿಯ ಅಧಿಕಾರಿಗಳು ಹಾಗೂ ಠಾಣೆಯ ಸಿಬ್ಬಂದಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
