ಉದಯವಾಹಿನಿ, ದಿಸ್ಪುರ: ಇಂದು ಶಿಕ್ಷಕರ ದಿನಾಚರಣೆ. ಈ ಸಂದರ್ಭದಲ್ಲಿ ಇಲ್ಲೊಬ್ಬ ಶಿಕ್ಷಕರ (teacher) ಬಗ್ಗೆ ನಿಮಗೆ ತಿಳಿಯಲೇಬೇಕು. ಯಾಕೆಂದರೆ ಶಾಲೆಯಿಂದ ಹೊರಗುಳಿದ 300 ವಿದ್ಯಾರ್ಥಿಗಳನ್ನು ಮತ್ತೆ ತರಗತಿಗೆ ಕರೆತಂದು ಪಾಠ ಹೇಳಿಕೊಡುತ್ತಿದ್ದಾರೆ. ಇದಕ್ಕಾಗಿ ಅವರು ಪ್ರತಿನಿತ್ಯ 150 ಕಿ.ಮೀ ದೂರ ಪ್ರಯಾಣಿಸುತ್ತಾರೆ. ಅಸ್ಸಾಂ (Assam) ನ ದೇಬಜಿತ್ ಘೋಷ್ ಎಂಬ ಶಿಕ್ಷಕ, ಆನೆಗಳಿರುವ ಪ್ರದೇಶ ಮತ್ತು ಕೆಸರುಮಯ ರಸ್ತೆಗಳನ್ನು ಹೊಂದಿರುವ ದಿಹಿಂಗ್ ಪಟ್ಕೈ ರಾಷ್ಟ್ರೀಯ ಉದ್ಯಾನವನದ ಕಠಿಣ ಭೂಪ್ರದೇಶದಲ್ಲಿ ಸಂಚರಿಸುತ್ತಾ, ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. 34 ವರ್ಷ ವಯಸ್ಸಾಗಿರುವ ಇವರಿಗೆ, ಪ್ರಾಥಮಿಕ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬೇಕಾದ ಮಕ್ಕಳ ಬೆಳಕಾಗಿದ್ದಾರೆ.
ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಈ ಶಿಕ್ಷಕನ ಕರ್ತವ್ಯ ನಿಷ್ಠೆ ಇದೀಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಈ ಸಮರ್ಪಣೆಗೆ ಸೆಪ್ಟೆಂಬರ್ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ 2025 ರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಭಾಜನರಾದ 45 ಶಿಕ್ಷಕರಲ್ಲಿ ಇವರೂ ಒಬ್ಬರು.
2022ರಲ್ಲಿ ಸ್ಥಾಪನೆಯಾದ ನಮ್ಸಾಂಗ್ ಟೀ ಎಸ್ಟೇಟ್ ಮಾದರಿ ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಘೋಷ್ ದಿಬ್ರುಗಢದಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಾರೆ. ಜೊತೆಗೆ ಇತರ ಇಬ್ಬರು ಶಿಕ್ಷಕರನ್ನು ಕೂಡ ಕರೆದುಕೊಂಡು ಹೋಗುತ್ತಾರೆ. ಆದರೆ ಇತರರು ಶಾಲೆಗೆ ನೇರ ಸಾರ್ವಜನಿಕ ಸಾರಿಗೆ ಇಲ್ಲದ ಕಾರಣ ಬೈಕ್‌ನಲ್ಲಿ ಪ್ರಯಾಣಿಸುತ್ತಾರೆ. 2013 ರಲ್ಲಿ ದಿಬ್ರುಗಢ ಪ್ರೌಢಶಾಲೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಘೋಷ್, 8 ನೇ ತರಗತಿಯ ವಿದ್ಯಾರ್ಥಿ ಅಭಿಷೇಕ್ ಎಂಬಾತನಿಗೆ ಅದ್ಭತವಾಗಿ ಮಾರ್ಗದರ್ಶನ ನೀಡಿ ಸುದ್ದಿಯಾಗಿದ್ದರು. ಅಭಿಷೇಕ್‍ಗೆ ವಿಜ್ಞಾನ ವಿಷಯವು ಕಷ್ಟವಾಗಿದ್ದರಿಂದ ಘೋಷ್ ಆತನಿಗೆ ಪಾಠ ಹೇಳಿಕೊಟ್ಟರು. ಇದರಿಂದ ಗಮನಾರ್ಹವಾಗಿ ಸುಧಾರಣೆ ಕಂಡ ಅಭಿಷೇಕ್ ವಿಜ್ಞಾನದಲ್ಲಿ 100ಕ್ಕೆ 100 ಅಂಕ ಗಳಿಸುವಲ್ಲಿ ಸಫಲನಾದ. ಅಸ್ಸಾಂ ಮಂಡಳಿಯ 10ನೇ ತರಗತಿ ಪರೀಕ್ಷೆಯಲ್ಲಿ ಒಟ್ಟಾರೆಯಾಗಿ ಶೇ. 93 ರಷ್ಟು ಅಂಕವನ್ನು ಪಡೆದರು.

Leave a Reply

Your email address will not be published. Required fields are marked *

error: Content is protected !!