ಉದಯವಾಹಿನಿ, ಮುಂಬೈ: ಮಹಾರಾಷ್ಟ್ರದ ನೇರಲ್‌ನಲ್ಲಿ, ತಲೆ ಎತ್ತಲಿರುವ ಸಮುಚ್ಛಯ ಭವನದ ಜಾಹೀರಾತೊಂದು ವಿವಾದದ ಕಿಡಿ ಹೊತ್ತಿಸಿದ್ದು, ‘ಸುಕೂನ್ ಎಂಪೈರ್’ ಎಂಬ ವಸತಿ ಯೋಜನೆ ಜಾಹೀರಾತು ಇದಾಗಿದೆ. ಹೌದು ‘ಹಲಾಲ್ ಲೈಫ್‌ಸ್ಟೈಲ್ ಟೌನ್‌ಶಿಪ್’ ಎಂದು ಪ್ರಚಾರ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿದೆ. “ಹಲಾಲ್ ಲೈಫ್‌ಸ್ಟೈಲ್ ಟೌನ್‌ಶಿಪ್” ಎಂದಿರುವ ಈ ಯೋಜನೆ, ಧಾರ್ಮಿಕವಾಗಿ ಜನರನ್ನು ಪ್ರಚೋದಿಸುವ ಅಂಶವನ್ನು ಹೊಂದಿದೆ ಎಂದು ಟೀಕೆಗೊಳಗಾಗಿದೆ.
ಜಾಹೀರಾತಿನಲ್ಲಿ ಹಿಜಾಬ್ ಧರಿಸಿದ ಮಹಿಳೆಯೊಬ್ಬರು ಈ ಟೌನ್‌ಶಿಪ್‌ನಲ್ಲಿ “ಒಂದೇ ಮನಸ್ಥಿತಿಯ ಕುಟುಂಬಗಳೊಂದಿಗೆ ಶುದ್ಧ ಸಮುದಾಯ ಜೀವನ” ಲಭ್ಯವಿರುವುದಾಗಿ ವಿವರಿಸಿದ್ದಾರೆ. ಪ್ರಾರ್ಥನಾ ಸ್ಥಳಗಳು ಮತ್ತು ಸಮುದಾಯ ಸಮಾರಂಭಗಳು ನಡೆಯುವ ಸ್ಥಳಗಳು ದೂರದಲ್ಲಿ ಇರಲಿವೆ ಎಂದು ಆಕೆ ಜಾಹೀರಾತಿನಲ್ಲಿ ತಿಳಿಸಿದ್ದಾರೆ. ಈ ವಿಡಿಯೋವನ್ನು ಮಾಜಿ ರಾಷ್ಟ್ರೀಯ ಬಾಲ ಹಕ್ಕುಗಳ ರಕ್ಷಣಾ ಆಯೋಗದ (NCPCR) ಅಧ್ಯಕ್ಷ ಪ್ರಿಯಾಂಕ್ ಕನೂಂಗೊ ತಮ್ಮ X ಖಾತೆಯಲ್ಲಿ ಹಂಚಿಕೊಂಡು, ಇದನ್ನು “ರಾಷ್ಟ್ರದೊಳಗಿನ ರಾಷ್ಟ್ರ” ಎಂದು ಬಣ್ಣಿಸಿದ್ದಾರೆ. ಈ ಜಾಹೀರಾತು ಧಾರ್ಮಿಕ ಆಧಾರದಲ್ಲಿ ವಿಭಜನೆಯನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಲಾಗಿದೆ.
ಟೀಕೆ ಮತ್ತು ಕ್ರಮ: ವಿವಾದದ ಬಳಿಕ, ರಿಯಲ್ ಎಸ್ಟೇಟ್ ಕಂಪನಿಯು ಜಾಹೀರಾತನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಿದೆ. ಕನೂಂಗೊ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ ಎಂದಿದ್ದಾರೆ. ಆಲ್ ಇಂಡಿಯಾ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಝ್ವಿ ಬರೇಲ್ವಿ, “ಹಲಾಲ್” ಎಂಬ ಪದವನ್ನು ಬಳಸಿರುವುದನ್ನು ಖಂಡಿಸಿದ್ದು, “ಇದು ಸಮಾಜದಲ್ಲಿ ದ್ವೇಷವನ್ನು ಹರಡುವ ಪ್ರಯತ್ನವಾಗಿದೆ. ಈ ಯೋಜನೆಯ ಹಿಂದಿರುವವರು ಸಮಾಜವನ್ನು ಒಂದುಗೂಡಿಸುವ ಬದಲು ವಿಭಜನೆ ಸೃಷ್ಟಿಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
