ಉದಯವಾಹಿನಿ, ನೈಜೀರಿಯಾ: ಇತ್ತೀಚೆಗೆ ಬಿಹಾರದ ಹದಿಹರೆಯದ ಹುಡುಗನೊಬ್ಬ ಸ್ಕ್ರಾಪ್ ವಸ್ತುಗಳನ್ನು ಉಪಯೋಗಿಸಿ ವಿಮಾನ ತಯಾರಿಸಿ ಎಲ್ಲರ ಹುಬ್ಬೇರಿಸಿದ್ದ. ಅಷ್ಟೇ ಅಲ್ಲ ಅದನ್ನು 400 ಮೀಟರ್‌ಗಳಷ್ಟು ಎತ್ತರ ಹಾರಿಸಿದ್ದ ಕೂಡ. ಗ್ರಾಮೀಣ ಭಾಗದ ಈ ವಿದ್ಯಾರ್ಥಿಯ ಸಾಧನೆಗೆ ಎಲ್ಲರೂ ಭೇಷ್ ಅಂದಿದ್ದರು. ಅಷ್ಟೇ ಅಲ್ಲ ಇತ್ತೀಚೆಗೆ ಸೋಡಾ ಬಾಟಲ್‍ನಿಂದ ಎರಡು ಹಂತದ ರಾಕೆಟ್ ಲಾಂಚ್ ಅನ್ನು ಯಶಸ್ವಿಯಾಗಿ ಮಾಡಿದ್ದ ಚೀನಾದ ಮಕ್ಕಳ ವಿಡಿಯೊ ವೈರಲ್ ಆಗಿತ್ತು. ಅದೇ ರೀತಿ ಆಫ್ರಿಕಾದ ಮಕ್ಕಳ ಆವಿಷ್ಕಾರವೊಂದು ಎಲ್ಲರ ಮನಸೂರೆಗೊಂಡಿದೆ. ಮಾನವ ಮೂತ್ರದಿಂದ ವಿದ್ಯುತ್ ಉತ್ಪಾದನೆ ಮಾಡುವ ಆವಿಷ್ಕಾರವನ್ನು ಮೂವರು ವಿದ್ಯಾರ್ಥಿನಿಯರು ಮಾಡಿದ್ದಾರೆ.
ಮುಂದಿನ ಕೆಲವು ವರ್ಷಗಳಲ್ಲಿ ಜಗತ್ತಿನಾದ್ಯಂತ ಇಂಧನ ಕೊರತೆ ಕಾಣಬಹುದು. ಹೀಗಾಗಿ ಹಲವು ದೇಶಗಳು ಸೋಲಾರ್ ಶಕ್ತಿಯ ಉತ್ಪಾದನೆಗೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಈ ನಡುವೆ ದಕ್ಷಿಣ ಆಫ್ರಿಕಾದ ನೈಜೀರಿಯಾದ ಮೂವರು ವಿದ್ಯಾರ್ಥಿನಿಯರ ಈ ಸಾಧನೆ ನಿಜಕ್ಕೂ ಮೆಚ್ಚುವಂತದ್ದು. ಮಾನವನ ಮೂತ್ರದಿಂದ ವಿದ್ಯುತ್ ಉತ್ಪಾದಿಸುವ ಜನರೇಟರ್ ಅನ್ನು ಈ ಹೆಣ್ಣುಮಕ್ಕಳು ಆವಿಷ್ಕರಿಸಿದ್ದಾರೆ. ಹದಿಹರೆಯದ ಬಾಲಕಿಯರು ಕಂಡುಹಿಡಿದಿರುವ ಈ ಜನರೇಟರ್ ಯಂತ್ರವು 1 ಲೀಟರ್ ಮೂತ್ರದಿಂದ 6 ಗಂಟೆಗಳಿಗೆ ಬೇಕಾಗುವಷ್ಟು ವಿದ್ಯುತ್ ಅನ್ನು ಉತ್ಪಾದಿಸಬಹುದು ಎಂದು ಹೇಳಲಾಗಿದೆ.
ಬಾಲಕಿಯರ ಈ ಸಾಧನೆಗೆ ಎಲ್ಲೆಡೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಅಂದಹಾಗೆ, ಈ ಪ್ರಕ್ರಿಯೆಯು ಮೂತ್ರದಿಂದ ಹೈಡ್ರೋಜನ್ ಅನ್ನು ಹೊರತೆಗೆಯುವ ಮೂಲಕ ಕಾರ್ಯನಿರ್ವಹಿಸುತ್ತದೆ. ನಂತರ ಅದನ್ನು ಜನರೇಟರ್‌ಗೆ ಶಕ್ತಿ ತುಂಬಲು ಬಳಸಲಾಗುತ್ತದೆ. ಇದು ಪರಿಣಾಮಕಾರಿ ಮಾತ್ರವಲ್ಲದೆ ಪರಿಸರ ಸ್ನೇಹಿಯೂ ಆಗಿದೆ. ಸೀಮಿತ ವಿದ್ಯುತ್ ಸೌಲಭ್ಯವಿರುವ ಪ್ರದೇಶಗಳಿಗೆ ಇದು ನವೀಕರಿಸಬಹುದಾದ ಇಂಧನ ಪರಿಹಾರವನ್ನು ನೀಡುತ್ತದೆ. ವಿದ್ಯಾರ್ಥಿನಿಯರ ಈ ಆವಿಷ್ಕಾರವು ಸೃಜನಶೀಲತೆ, ವಿಜ್ಞಾನ ಮತ್ತು ತ್ಯಾಜ್ಯವನ್ನು ಹೇಗೆ ಉಪಯುಕ್ತ ಸಾಧನವನ್ನಾಗಿ ಪರಿವರ್ತಿಸಬಹುದು ಎಂಬುದನ್ನು ತೋರಿಸುತ್ತದೆ. ಈ ಸುದ್ದಿ ಇದೀಗ ಭಾರಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

error: Content is protected !!