ಉದಯವಾಹಿನಿ, ಬೀಜಿಂಗ್‌: ಚೀನಾದಲ್ಲಿ ನಡೆದ ಎರಡನೇ ಮಹಾಯುದ್ಧದ ವಿಕ್ಟರಿ ಪರೇಡ್ ನಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಪಾಲ್ಗೊಂಡಿದ್ದರು. ಇದಾದ ಬಳಿಕ ಕಿಮ್ ಜಾಂಗ್ ಉನ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಮಾತುಕತೆ ನಡೆದಿತ್ತು. ಚರ್ಚೆಯ ನಂತರ ವಿಚಿತ್ರ ಘಟನೆಯೊಂದು ನಡೆದಿದೆ. ಉತ್ತರ ಕೊರಿಯಾ ಸಿಬ್ಬಂದಿ ಸರ್ವಾಧಿಕಾರಿ ಮುಟ್ಟಿದ್ದ ಎಲ್ಲ ವಸ್ತುಗಳನ್ನೂ ಸ್ವಚ್ಛಗೊಳಿಸಿದ ವಿಲಕ್ಷಣ ಘಟನೆ ನಡೆದಿದೆ.

ಎರಡನೇ ಮಹಾಯುದ್ಧದ ವಿಕ್ಟರಿ ಪರೇಡ್‌ ಕಾರ್ಯಕ್ರಮದಲ್ಲಿ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಶಕ್ತಿ ಪ್ರದರ್ಶನ ನಡೆಸಿದ್ದರು. ಈ ವೇಳೆ ಪುಟಿನ್‌ ಮತ್ತು ಕಿಮ್‌ ನಡುವೆ ಮಾತುಕತೆ ನಡೆಯಿತು. ಪುಟಿನ್ ಭೇಟಿ ಬಳಿಕ ಕಿಮ್ ಜಾಂಗ್‌ ಉನ್‌ ಬೆವರನ್ನು ಬಿಡದೇ ಸಾಕ್ಷಿಯನ್ನು ಸಿಬ್ಬಂದಿ ಅಳಿಸಿಹಾಕಿದ್ದಾರೆ. ಇದರ ವಿಡಿಯೋ ಈಗ ಭಾರೀ ವೈರಲ್‌ ಆಗಿದೆ. ಇದರಲ್ಲಿ ಕಿಮ್ ಜಾಂಗ್ ಜೊತೆಗಿರುವ ಸಿಬ್ಬಂದಿ ಅವರ ಸಭೆಯ ನಂತರ ಕೋಣೆಯಲ್ಲಿದ್ದ ವಸ್ತುಗಳನ್ನು ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು. ಅದು ಸಾಮಾನ್ಯವಾಗಿ ಸ್ವಚ್ಛಗೊಳಿಸುತ್ತಿರುವುದಲ್ಲ. ಬದಲಾಗಿ ಡೀಪ್‌ ಕ್ಲೀನ್‌ ಮಾಡಲಾಗುತ್ತಿದೆ.
ಈ ವಿಡಿಯೋವನ್ನು ರಷ್ಯಾದ ಪತ್ರಕರ್ತ ಅಲೆಕ್ಸಾಂಡರ್ ಯುನಾಶೇವ್ ತಮ್ಮ ಟೆಲಿಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ, ಉತ್ತರ ಕೊರಿಯಾದ ಅಧಿಕಾರಿಗಳು ಸಭೆಯ ಸ್ಥಳದಲ್ಲಿ ಕಿಮ್ ಜಾಂಗ್ ಅವರ ಕುರ್ಚಿಯ ಹಿಂಭಾಗವನ್ನು ಸ್ವಚ್ಛಗೊಳಿಸುವುದನ್ನು ಮತ್ತು ಅವರ ವಿಸ್ಕಿ ಗ್ಲಾಸ್ ಮತ್ತು ಟ್ರೇ ಅನ್ನು ತೆಗೆದುಹಾಕುವುದನ್ನು ಕಾಣಬಹುದು. ಕೊರಿಯನ್ ನಾಯಕ ಮುಟ್ಟಿದ ಪೀಠೋಪಕರಣಗಳ ಭಾಗಗಳನ್ನು ಕೂಡ ಸಿಬ್ಬಂದಿ ಸ್ವಚ್ಛಗೊಳಿಸಿದ್ದಾರೆ. ಅವರು ಅಲ್ಲಿ ಬಂದು ಕುಳಿತಿದ್ದಕ್ಕೆ ಯಾವುದೇ ಕುರುಹು ಇಲ್ಲದಂತೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!