ಉದಯವಾಹಿನಿ, ನವದೆಹಲಿ: ಉತ್ತರ ಭಾರತದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಭಾರೀ ಪ್ರಮಾಣದ ಹಾನಿಯುಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪಂಜಾಬ್‌ನಲ್ಲಿ ಪ್ರವಾಹದಿಂದಾಗಿ 45 ಜನರು ಸಾವನ್ನಪ್ಪಿದ್ದು, ರಾಜ್ಯದ 23 ಜಿಲ್ಲೆಗಳ 1,655 ಹಳ್ಳಿಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. 20,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭಾರೀ ಮಳೆಯಿಂದಾಗಿ 1.71 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದ ಬೆಳೆಗಳು ನಾಶವಾಗಿವೆ. ಇನ್ನು ಜಮ್ಮು-ಶ್ರೀನಗರ ಹೆದ್ದಾರಿ ಮತ್ತು ಸಿಂಥಾನ್ ರಸ್ತೆಯ ಹಲವಾರು ಸ್ಥಳಗಳಲ್ಲಿ ಭೂಕುಸಿತ, ಮಣ್ಣು ಕುಸಿತ ಮತ್ತು ಕಲ್ಲುಗಳು ಬೀಳುವುದರಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ಜಮ್ಮು-ಶ್ರೀನಗರ ಹೆದ್ದಾರಿಯನ್ನು ಮುಚ್ಚಲಾಗಿದೆ. ಮೊಘಲ್ ರಸ್ತೆಯಲ್ಲಿ ಸಂಚಾರವನ್ನು ಪುನಃಸ್ಥಾಪಿಸಲಾಗಿದೆ.
ಭದ್ರತಾ ಕಾರಣಗಳಿಂದಾಗಿ ಮಾತಾ ವೈಷ್ಣೋ ದೇವಿಯ ಯಾತ್ರೆಯನ್ನು 11ನೇ ದಿನವೂ ಸ್ಥಗಿತಗೊಳಿಸಲಾಗಿದೆ. ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ಭೂಕುಸಿತದ ಸಂಭವಿಸಿದ್ದು, ಕನಿಷ್ಠ ನಾಲ್ಕು ಜನರನ್ನು ಹೊತ್ತ ವ್ಯಾನ್ ತೆರೆದ ಗುಂಡಿಯ ಕೆಳಭಾಗದಲ್ಲಿ ಸಂಗ್ರಹವಾದ ನೀರಿನಲ್ಲಿ 150 ಅಡಿ ಆಳಕ್ಕೆ ಬಿದ್ದಿದೆ. ಹರಿಯಾಣದಲ್ಲೂ ಭಾರಿ ಮಳೆ ಮುಂದುವರಿದ ಪರಿಣಾಮ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಾಜಸ್ಥಾನ, ಗುಜರಾತ್‌ನ ಕೆಲ ಭಾಗಗಳಲ್ಲಿ ಇಂದು ಮಳೆ ಮುಂದುವರಿಯಲಿದೆ. ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಸ್ಥಿತಿ ಇನ್ನಷ್ಟು ಹೆಚ್ಚಲಿದೆ.

Leave a Reply

Your email address will not be published. Required fields are marked *

error: Content is protected !!