ಉದಯವಾಹಿನಿ, ಜಗತ್ತಿನ ಮೇಲೆ ದೊಡ್ಡಣ್ಣ ಅಮೆರಿಕ ಸುಂಕದ ಸಮರವನ್ನು ಸಾರುತ್ತಿರುವ ಬೆನ್ನಲ್ಲೇ ಇತ್ತ ಭಾರತ ಹಾಗೂ ಚೀನಾದ ನಡುವಿನ ಹೊಸ ಸಂಬಂಧ ಬೆಳೆಯುವ ಆಶಾ ಭಾವನೆ ಮೂಡಿದೆ. ಚೀನಾದ ಟಿಯಾಂಜಿನ್‌ನಲ್ಲಿ ಇತ್ತೀಚೆಗೆ ನಡೆದ ಶಾಂಘೈ ಸಹಕಾರ ಒಕ್ಕೂಟದ ಶೃಂಗಸಭೆ ಜಾಗತಿಕ ರಾಜಕೀಯದ ಮಹತ್ವಪೂರ್ಣ ವೇದಿಕೆಯಾಗಿತ್ತು.ಈ ಶೃಂಗಸಭೆಯಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ದ್ವಿಪಕ್ಷೀಯ ಸಭೆ ವಿಶ್ವದ ಗಮನ ಸೆಳೆದಿದೆ.
ದ್ವಿಪಕ್ಷೀಯ ಸಭೆಗೂ ಮೊದಲು ಎರಡು ದೇಶಗಳು ಗಡಿಯಲ್ಲಿ ನಿಯೋಜನೆಗೊಂಡಿದ್ದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ಕಳೆದ ವರ್ಷ ಈ ಪ್ರಕ್ರಿಯೆ ಆರಂಭಗೊಂಡಿತ್ತು. ನಂತರ ಅಜಿತ್ ದೋವಲ್, ಜೈಶಂಕರ್ ಚೀನಾಗೆ ಹೋಗಿದ್ದರು. ಚೀನಾದ ಅಧಿಕಾರಿಗಳು ಭಾರತಕ್ಕೆ ಬಂದಿದ್ದರು. ಎರಡೂ ಕಡೆ ಮತ್ತೆ ಸಂಬಂಧ ಸುಧಾರಣೆಯಾದ ಹಿನ್ನೆಲೆಯಲ್ಲಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಮಹತ್ವದ ಮಾತುಕತೆ ನಡೆಸಿದರು. ಗಲ್ವಾನ್ ಕಣಿವೆ ಘರ್ಷಣೆಯ ನಂತರ 7 ವರ್ಷಗಳ ಬಳಿಕ ಪ್ರಧಾನಿ ಮೋದಿ ಚೀನಾಕ್ಕೆ ನೀಡಿದ್ದು ವಿಶೇಷವಾಗಿತ್ತು. ಅಮೆರಿಕ ವಿಧಿಸಿರುವ ಸುಂಕಗಳು ಮತ್ತು ಚೀನಾದ ಅಸ್ಥಿರ ಸಂಬಂಧಗಳ ನಡುವೆಯೂ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ 50 ನಿಮಿಷಗಳಿಗೂ ಹೆಚ್ಚು ಕಾಲ ದ್ವಿಪಕ್ಷೀಯ ಸಭೆ ನಡೆಸಿದರು.
