ಉದಯವಾಹಿನಿ, ಚೆನ್ನೈ: 2019ರಲ್ಲಿ ತೆರೆಕಂಡ ʼಬೀರ್‌ಬಲ್‌ ತ್ರಯಾಲಜಿʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರುಕ್ಮಿಣಿ ವಸಂತ್‌ ಸ್ವಲ್ಪ ಗ್ಯಾಪ್‌ ಬಳಿಕ 2023ರಲ್ಲಿ ರಿಲೀಸ್‌ ಆದ ʼಸಪ್ತ ಸಾಗರದಾಚೆ ಎಲ್ಲೋʼ-ಸೈಡ್‌ ಎ ಮತ್ತು ಸೈಡ್‌ ಬಿ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಆಪ್ತರಾದರು. ಮಧ್ಯಮ ವರ್ಗದ ಯುವತಿ, ಭಗ್ನ ಪ್ರೇಮಿ ಪಾತ್ರದಲ್ಲಿ ಮೋಡಿ ಮಾಡಿದ್ದ ಅವರು ಆ ಚಿತ್ರದ ಮೂಲಕ ಪರಭಾಷಿಕರ ಗಮನವನ್ನೂ ಸೆಳೆಯಲು ಯಶಸ್ವಿಯಾದರು. ಸದ್ಯ ಅವರು ತಮಿಳು ಮತ್ತು ತೆಲುಗಿನಲ್ಲಿ ಬಹು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಸೆಪ್ಟೆಂಬರ್‌ 5ರಂದು ತೆರೆಕಂಡ, ರುಕ್ಮಿಣಿ ನಟಿಸಿರುವ ಶಿವ ಕಾರ್ತಿಕೇಯನ್‌-ಎ.ಆರ್‌.ಮುರುಗದಾಸ್‌ ಕಾಂಬಿನೇಷನ್‌ನ ʼಮದರಾಸಿʼ ಸಿನಿಮಾ ಇದೀಗ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ.

ಮೇಯಲ್ಲಿ ರಿಲೀಸ್‌ ಆದ ವಿಜಯ್‌ ಸೇತುಪತಿ ಜತೆಗೆ ʼಏಸ್‌ʼ ಮೂಲಕ ಕಾಲಿವುಡ್‌ಗೆ ಕಾಲಿಟ್ಟ ರುಕ್ಮಿಣಿಗೆ ಮೊದಲ ಚಿತ್ರದಲ್ಲೇ ನಿರಾಸೆ ಎದುರಾಗಿತ್ತು. ಈ ಚಿತ್ರದಲ್ಲಿನ ಅವರ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆವಾಗಿದ್ದರೂ ಸಿನಿಮಾ ಬಾಕ್ಸ್‌ ಆಫೀಸ್‌ ಮ್ಯಾಜಿಕ್‌ ಮಾಡಲು ವಿಫಲವಾಗಿತ್ತು. ಇದೀಗ 2ನೇ ಚಿತ್ರದ ಮೂಲಕ ಅವರು ಗೆಲುವಿನ ಹಳಿಗೆ ಮರಳಿದ್ದಾರೆ. ʼಸಿಕಂದರ್‌ʼ ಮೂಲಕ ಬಾಲಿವುಡ್‌ನಲ್ಲಿ ಕೈ ಸುಟ್ಟುಕೊಂಡಿದ್ದ ನಿರ್ದೇಶಕ ಎ.ಆರ್‌. ಮುರುಗದಾಸ್‌ ಈ ಬಾರಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ.

ಮೊದಲ ದಿನ ಕಲೆಕ್ಷನ್‌: ಕಳೆದ ವರ್ಷ ತೆರೆಕಂಡ ʼಅಮರನ್‌ʼ ಚಿತ್ರದ ಮೂಲಕ ಶಿವಕಾರ್ತಿಕೇಯನ್‌ ಬಹುದೊಡ್ಡ ಯಶಸ್ಸು ಪಡೆದುಕೊಂಡಿದ್ದರು. ಜತೆಗೆ ಅವರ ನಟನೆಗೆ ಭಾರಿ ಪ್ರಶಂಸೆಯೂ ಲಭಿಸಿತ್ತು. ಈ ಚಿತ್ರಕ್ಕಾಗಿ ಅವರು ರಾಷ್ಟ್ರ ಪ್ರಶಸ್ತಿ ಪಡೆದರೂ ಅಚ್ಚರಿ ಇಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿತ್ತು. ಹೀಗಾಗಿ ಅವರ ಮುಂದಿನ ಚಿತ್ರದ ಬಗ್ಗೆ ಸಹಜವಾಗಿಯೇ ಕುತೂಹಲವಿತ್ತು. ಇದೇ ಕಾರಣಕ್ಕೆ ʼಮದರಾಸಿʼ ಬಗ್ಗೆ ಹಿಂದಿನಿಂದಲೂ ಬೆಟ್ಟದಷ್ಟು ನಿರೀಕ್ಷೆ ಇತ್ತು. ಇದೀಗ ರಿಲೀಸ್‌ ಆಗಿರುವ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ಮಾಡುತ್ತಿದೆ.

ಸಾಮಾನ್ಯ ವ್ಯಕ್ತಿಯೊಬ್ಬ ಅಂಡರ್‌ ವರ್ಲ್ಡ್‌ಗೆ ಕಾಲಿಡುವ ಕಥೆಯನ್ನು ಒಳಗೊಂಡ ಈ ಸೈಕಾಲಜಿಕಲ್‌ ಆ್ಯಕ್ಷನ್ ಥ್ರಿಲ್ಲರ್‌ ಮೊದಲ ದಿನ ತಮಿಳುನಾಡಿನಲ್ಲಿ 9.92 ಕೋಟಿ ರೂ. ಗಳಿಸಿದ್ದು, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸುಮಾರು 15 ಕೋಟಿ ರೂ. ಕಲೆ ಹಾಕಿದೆ. ಇದು ತಮಿಳು ಜತೆಗೆ ಕನ್ನಡ ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲೂ ತೆರೆಕಂಡಿದೆ.

Leave a Reply

Your email address will not be published. Required fields are marked *

error: Content is protected !!