ಉದಯವಾಹಿನಿ, ಬೆಂಗಳೂರು: ಇಂಟರ್ ಸರ್ವೀಸಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌(Inter Services Athletics Championship)ನಲ್ಲಿ 20 ವರ್ಷದ ಶಿವಂ ಲೋಹಕರೆ(Shivam Lohakare) ಅವರು ಅವಳಿ ಒಲಿಂಪಿಕ್‌ ಪದಕ ವಿಜೇತ, ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ(Neeraj Chopra) ಅವರ ಹೆಸರಿನಲ್ಲಿದ್ದ ಕೂಟ ದಾಖಲೆಯನ್ನು ಮುರಿದು ಚಿನ್ನದ ಪದಕ ಗೆದ್ದರು.
ಜಾಲಹಳ್ಳಿಯಲ್ಲಿ ನಡೆದಿದ್ದ ಟೂರ್ನಿಯಲ್ಲಿ, ಆರ್ಮಿ ರೆಡ್‌ ತಂಡವನ್ನು ಪ್ರತಿನಿಧಿಸಿದ ಶಿವಂ (ಮಹಾರಾಷ್ಟ್ರ) ಅವರು 84.31 ಮೀಟರ್‌ ದೂರ ಈಟಿಯನ್ನು ಎಸೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇದೇ ವೇಳೆ ನೀರಜ್‌ ಚೋಪ್ರಾ (83.80 ಮೀ) ಅವರ ದಾಖಲೆ ಪತನಗೊಂಡಿತು. ಆದರೆ ಈ ಕೂಟವು ವಿಶ್ವ ಅಥ್ಲೆಟಿಕ್ಸ್‌ನಿಂದ ಮಾನ್ಯತೆ ಪಡೆಯದ ಕಾರಣ ವೈಯಕ್ತಿಕ ಶ್ರೇಷ್ಠ ದಾಖಲೆಗೆ ಪರಿಗಣಿಸುವುದಿಲ್ಲ.

ಕರ್ನಾಟಕದ ಮಣಿಕಂಠ ಹೋಬಳಿದಾರ್ ಈ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಆರ್ಮಿ ರೆಡ್ ತಂಡವನ್ನು ಪ್ರತಿನಿಧಿಸಿದ ಅವರು 100 ಮೀ, 200 ಮೀ ಮತ್ತು 4×100 ಮೀ ರಿಲೆನಲ್ಲಿ ಸೇರಿ ಒಟ್ಟು ಮೂರು ಚಿನ್ನದ ಪದಕಗಳನ್ನು ಗೆದ್ದರು.

ಶಿವಂ ಅವರ ಈ ಸಾಧನೆಗೆ ನೀರಜ್‌ ಚೋಪ್ರಾ ಅವರು ಮೆಚ್ಚುಗೆ ಸೂಚಿಸಿದ್ದು, “ಶಿವಂ, ತುಂಬಾ ಚೆನ್ನಾಗಿದೆ, ಅಭಿನಂದನೆಗಳು. ಮುಂದುವರಿಸಿ” ಎಂದು ಉದಯೋನ್ಮುಖ ತಾರೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ತಿಂಗಳ ಕೊನೆಯಲ್ಲಿ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಮತ್ತು ಅರ್ಷದ್ ನದೀಮ್ ತಮ್ಮ ಪ್ಯಾರಿಸ್ ಒಲಿಂಪಿಕ್ಸ್ ಜಾವೆಲಿನ್ ಫೈನಲ್‌ನ ಹೈ ಪ್ರೊಫೈಲ್ ಮರುಪಂದ್ಯಕ್ಕೆ ಸಜ್ಜಾಗಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಚೋಪ್ರಾ ಸೆಪ್ಟೆಂಬರ್ 13-21 ರ ಪ್ರದರ್ಶನದಲ್ಲಿ 19 ಸದಸ್ಯರ ಭಾರತೀಯ ತಂಡವನ್ನು ಮುನ್ನಡೆಸುತ್ತಿದ್ದರೆ. ನದೀಮ್ ಪಾಕಿಸ್ತಾನದ ಏಕೈಕ ಅಥ್ಲೀಟ್ ಆಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!