ಉದಯವಾಹಿನಿ, ಬೆಂಗಳೂರು: ಬಿಜೆಪಿ ನಾಯಕ ಸಿ.ಟಿ ರವಿ ದ್ವೇಷ ಭಾಷಣ ಮಾಡಿದ್ದಕ್ಕೆ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಎಫ್‌ಐಆರ್ (FIR) ಹಾಕಿರೋದನ್ನ ಸಮರ್ಥನೆ ಮಾಡಿಕೊಂಡಿದ್ದಾರೆ. ಸಿ.ಟಿ ರವಿ ಮೇಲೆ ಎಫ್‌ಐಆರ್ ಆಗಿರೋ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿ.ಟಿ ರವಿ ಅವರ ಮಾತು ಕೇಳಿದ್ದೇನೆ. ತೊಡೆ ಮುರಿಯೋದು, ತಲೆ ತೆಗೆಯೋದು ಅಂತೆಲ್ಲ ಮಾತಾಡಿದ್ದಾರೆ. ರವಿ ಅವರು ಸಚಿವರಾಗಿದ್ದವರು,ಶಾಸಕರು. ಅಂತಹವರ ಬಾಯಿಂದ ಇಂತಹ ಪದ ಬಳಕೆ ಸರಿನಾ..? ಜನರೇ ಇದನ್ನ ತೀರ್ಮಾನ ಮಾಡಲಿ. ಹಾಗೆ ದ್ವೇಷ ಭಾಷಣ ಮಾಡಿದ್ದಕ್ಕೆ ಕೇಸ್ ಹಾಕಿದ್ದಾರೆ. ಅದರಲ್ಲಿ ತಪ್ಪೇನು ಎಂದು ಎಫ್‌ಐಆರ್ ಸಮರ್ಥನೆ ಮಾಡಿಕೊಂಡರು.
ಇದೇ ವೇಳೆ ಸಿಎಂ ಪಾಕಿಸ್ತಾನ ಹೋಗಲಿ ಎಂಬ ವಿಪಕ್ಷ ನಾಯಕ ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಶೋಕ್ ಹೀಗೆ ಮಾತಾಡೋದು ಸರಿಯಲ್ಲ. ಅವರ ಹೇಳಿಕೆ ವಿಪಕ್ಷ ನಾಯಕನ ಸ್ಥಾನಕ್ಕೆ ಗೌರವ ತರೋದಿಲ್ಲ. ಪ್ರಧಾನಿ ಮೋದಿ ಅವರು ಅಹ್ವಾನ ಇಲ್ಲದೆ ಪಾಕಿಸ್ತಾನಕ್ಕೆ ಹೋದರು, ಯಾಕೆ ಹೋದ್ರು? ಆಪರೇಷನ್ ಸಿಂಧೂರದಲ್ಲಿ ಇಡೀ ದೇಶ ಮೋದಿ ಪರ ಇತ್ತು. ಆದರೆ ಇವರು ರಾತ್ರೋರಾತ್ರಿ ಯುದ್ಧ ನಿಲ್ಲಿಸಿದ್ರು. ಪಾಕಿಸ್ತಾನವನ್ನ ಭೂಪಟದಲ್ಲಿ ಇಲ್ಲದಂತೆ ಮಾಡಬಹುದಿತ್ತು. ಯಾಕೆ ಮಾಡಲಿಲ್ಲ? ಅಶೋಕ್ ಹೀಗೆ ಮಾತಾಡೋದು ಸರಿಯಲ್ಲ. ಅಶೋಕ್ ತಮ್ಮ ಹೇಳಿಕೆ ವಾಪಸ್ ಪಡೆಯಲಿ ಎಂದು ಆಗ್ರಹಿಸಿದರು.
