ಉದಯವಾಹಿನಿ, ಕಳೆದ 18 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿರುವ ವಿರಾಟ್ ಕೊಹ್ಲಿ ತಂಡದ ಇತಿಹಾಸದಲ್ಲೇ ಅತ್ಯುತ್ತಮ ಎನ್ನಬಹುದಾದ ‘ಸಾರ್ವಕಾಲಿಕ ಶ್ರೇಷ್ಠ 11’ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ತಂಡದಲ್ಲಿ ಹಲವು ದಿಗ್ಗಜರ ಜೊತೆಗೆ ಇಬ್ಬರು ಕನ್ನಡಿಗರಿಗೂ ಸ್ಥಾನ ನೀಡಿರುವುದು ವಿಶೇಷ.
ತಂಡದ ಆರಂಭಿಕರಾಗಿ ವಿರಾಟ್ ಕೊಹ್ಲಿ ಅವರು ‘ಯೂನಿವರ್ಸಲ್ ಬಾಸ್’ ಕ್ರಿಸ್ ಗೇಲ್ ಅವರನ್ನು ಆಯ್ಕೆ ಮಾಡಿಕೊಂಡಿದ್ದು, ಗೇಲ್ ಜೊತೆ ತಾವು ಕೂಡ ಇನ್ನಿಂಗ್ಸ್ ಆರಂಭಿಸುವುದಾಗಿ ತಿಳಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಆರ್‌ಸಿಬಿಯ ಆಪತ್ಪಾಂಧವ ಎಬಿ ಡಿವಿಲಿಯರ್ಸ್ ಕಾಣಿಸಿಕೊಂಡರೆ, ನಾಲ್ಕನೇ ಕ್ರಮಾಂಕಕ್ಕೆ ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ಸ್ಥಾನ ನೀಡಿದ್ದಾರೆ.
ಈ ತಂಡದ ಐದನೇ ಕ್ರಮಾಂಕದಲ್ಲಿರಜತ್ ಪಾಟಿದಾರ್ ಅವರನ್ನು ಹೆಸರಿಸಿರುವ ಕೊಹ್ಲಿ ತಂಡದ ನಾಯಕತ್ವವನ್ನೂ ಅವರಿಗೇ ನೀಡಿದ್ದಾರೆ. ಆರ್‌ಸಿಬಿ ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟ ನಾಯಕ ಎಂಬ ಗೌರವದ ಹಿನ್ನೆಲೆಯಲ್ಲಿ ಪಾಟಿದಾರ್ ಈ ಸ್ಥಾನ ಅಲಂಕರಿಸಿದ್ದಾರೆ. ವಿಕೆಟ್ ಕೀಪರ್ ಜವಾಬ್ದಾರಿಯನ್ನು ಫಿನಿಶರ್ ದಿನೇಶ್ ಕಾರ್ತಿಕ್ ಅವರಿಗೆ ನೀಡಲಾಗಿದೆ.
ಬೌಲಿಂಗ್ ಪಡೆಯಲ್ಲಿ ಮೂವರು ಘಾತಕ ವೇಗಿಗಳಾದ ಹರ್ಷಲ್ ಪಟೇಲ್, ಮಿಚೆಲ್ ಸ್ಟಾರ್ಕ್ ಮತ್ತು ಡೇಲ್ ಸ್ಟೈನ್ ಅವರಿಗೆ ಸ್ಥಾನ ಸಿಕ್ಕಿದೆ. ಇನ್ನು ಸ್ಪಿನ್ ವಿಭಾಗದಲ್ಲಿ ಕರ್ನಾಟಕದ ಹೆಮ್ಮೆ ಅನಿಲ್ ಕುಂಬ್ಳೆ ಮತ್ತು ಚತುರ ಸ್ಪಿನ್ನರ್ ಯುಜೇಂದ್ರ ಚಹಲ್ ಮ್ಯಾಜಿಕ್ ಮಾಡಲಿದ್ದಾರೆ.
