ಉದಯವಾಹಿನಿ, ಆನೇಕಲ್: ಸಾಕಿದ ನಾಯಿಯನ್ನು ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಹೊಸೂರು ಸಮೀಪದ ಇರುತುಕೋಟೆ ಗ್ರಾಮದಲ್ಲಿ ನಡೆದಿದೆ. ಕೋಳಿ, ಮೇಕೆಗಳನ್ನು ಕಚ್ಚುತ್ತಿದೆ ಎಂದು ನಾಯಿಯನ್ನು ಕಂಬಕ್ಕೆ ಕಟ್ಟಿಹಾಕಿ, ಇಬ್ಬರು ವೃದ್ಧರು ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡುವಾಗ ಸ್ಥಳದಲ್ಲೇ ಇದ್ದ ಜನರು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ದೃಶ್ಯಗಳನ್ನು ನೋಡಿದರೆ ಕರುಳು ಕಿತ್ತು ಬರುವಂತಿದೆ. ನಾಯಿ ಎಷ್ಟೇ ಕಿರುಚಾಡಿದರೂ ಕೂಡ ಅಲ್ಲಿದ್ದವರು ಯಾರು ನಾಯಿಯ ರಕ್ಷಣೆಗೆ ಬಂದಿಲ್ಲ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ಕೃಷ್ಣಗಿರಿ ಜಿಲ್ಲಾ ಪ್ರಾಣಿ ಹಿಂಸೆ ತಡೆ ಸಂಘದ ಸದಸ್ಯರು ಭೇಟಿ ನೀಡಿ, ನಾಯಿಯ ರಕ್ಷಣೆ ಮಾಡಿದ್ದಾರೆ. ಸದ್ಯ ನಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಡೆಂಕಣಿಕೋಟೆ ಪೊಲೀಸ್ ಠಾಣೆಯಲ್ಲಿ ನಾಯಿಯ ಮಾಲೀಕ ಮತ್ತು ಮತ್ತೋರ್ವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.
