ಉದಯವಾಹಿನಿ, ಭಾರತವನ್ನು ಡೆಡ್ ಎಕಾನಮಿ ಎಂದು ಕರೆದಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ವರಸೆ ಬದಲಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನನ್ನ ಸ್ನೇಹಿತ. ಅವರ ಜೊತೆ ಮಾತನಾಡಲು ಎದುರು ನೋಡುತ್ತೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಒಂದೇ ವಾರದಲ್ಲಿ ಎರಡು ಬಾರಿ ಮೋದಿ ನನ್ನ ಸ್ನೇಹಿತ ಎಂದು ಕರೆಯುವ ಮೂಲಕ ವಿಶ್ವಕ್ಕೆ ಅಚ್ಚರಿ ನೀಡಿದ್ದಾರೆ. ಹೀಗಾಗಿ ದಿಢೀರ್ ಟ್ರಂಪ್‌ಗೆ ಭಾರತದ ಮೇಲೆ ಪ್ರೀತಿ ಬಂದಿದ್ದು ಯಾಕೆ? ಟ್ರಂಪ್ ಮಾತನ್ನು ನಾವು ನಂಬಬಹುದೇ? ಅಮೆರಿಕದ ʼವರಿʼ ಏನು ಇತ್ಯಾದಿ ವಿಚಾರಗಳನ್ನು ಇಲ್ಲಿ ವಿವರಿಸಲಾಗಿದೆ.
ತಲೆ ಕೆಡಿಸಿಕೊಳ್ಳದ ಭಾರತ: ಡೊನಾಲ್ಡ್ ಟ್ರಂಪ್ ತೆರಿಗೆ ಸಮರ ಆರಂಭಿಸಿದ ಬಳಿಕ ಯುರೋಪ್ ಸೇರಿದಂತೆ ಹಲವು ದೇಶಗಳ ಮುಖ್ಯಸ್ಥರು ಅಮೆರಿಕಕ್ಕೆ ತೆರಳಿ ಮಾತುಕತೆ ನಡೆಸಿದ್ದರು. ಬೇರೆ ದೇಶಗಳಂತೆ ಭಾರತವು ( ಅಮೆರಿಕದ ಜೊತೆ ಮಾತುಕತೆ ನಡೆಸುತ್ತಿತ್ತು. ಮಾತುಕತೆಯ ವೇಳೆ ಡೈರಿ ಮತ್ತು ಕೃಷಿ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿತ್ತು. ಹಲವು ಸುತ್ತಿನ ಮಾತುಕತೆ ನಡೆದರೂ ಭಾರತ ತನ್ನ ಹಠವನ್ನು ಬಿಟ್ಟಿರಲಿಲ್ಲ. ಇದಕ್ಕೆ ಸಿಟ್ಟಾದ ಟ್ರಂಪ್ ಭಾರತದ ಕೆಲ ವಸ್ತುಗಳ ಮೇಲೆ 25% ಸುಂಕ ವಿಧಿಸಿದರು. ಅಮೆರಿಕ ಸುಂಕ ವಿಧಿಸುತ್ತಿದ್ದಂತೆ ಭಾರತ ಆಫ್ರಿಕಾ, ಏಷ್ಯಾ, ಯರೋಪ್ ಜೊತೆ ವ್ಯಾಪಾರ ಮಾತುಕತೆ ನಡೆಸಲು ಮುಂದಾಯಿತು. ಈ ಬೆನ್ನಲ್ಲೇ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ ಟ್ರಂಪ್ ಮತ್ತೆ 25% ಸುಂಕ ಹೇರಿದರು. ಪರಿಣಾಮ ಆಮದಾಗುವ ಭಾರತದ ಕೆಲ ವಸ್ತುಗಳಿಗೆ ಈಗ ಅಮೆರಿಕದಲ್ಲಿ 50% ಸುಂಕ ವಿಧಿಸಲಾಗಿದೆ.
