ಉದಯವಾಹಿನಿ, ಅಮರಾವತಿ: ಆಂಧ್ರ ಪ್ರದೇಶದ ಕೋನಸೀಮ ಜಿಲ್ಲೆಯ ಮುಮ್ಮಿಡಿವರಂನಲ್ಲಿ ಕುಡಿದ ವ್ಯಕ್ತಿಯೊಬ್ಬ ಕತ್ತಿಗೆ ವಿಷಕಾರಿ ಹಾವನ್ನು (Snake) ಸುತ್ತಿಕೊಂಡು ಗ್ರಾಮದಲ್ಲಿ ಗಲಾಟೆ ಸೃಷ್ಟಿಸಿದ ಘಟನೆ ನಡೆದಿದೆ. ಈ ವಿಚಿತ್ರ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಗೊಲ್ಲಪಲ್ಲಿ ಕೊಂಡ ಎಂಬ ವ್ಯಕ್ತಿಯು ತನ್ನ ಮನೆಯ ಅಂಗಳದಲ್ಲಿ ಕೋಳಿಗಳನ್ನಿಡುವ ಪಂಜರದ ಬಳಿ ಕೆಲಸ ಮಾಡುತ್ತಿದ್ದಾಗ ವಿಷಕಾರಿ ಹಾವು ಕಚ್ಚಿದೆ. ಆದರೆ ಚಿಕಿತ್ಸೆ ಪಡೆಯುವ ಬದಲು ಆತ ಕುಡಿತದ ಆವೇಶದಲ್ಲಿ ಆ ಹಾವನ್ನು ಹಿಡಿದು ಕತ್ತಿಗೆ ಸುತ್ತಿಕೊಂಡಿದ್ದಾನೆ. “ನೀನು ನನ್ನನ್ನು ಕಚ್ಚುತ್ತೀಯಾ?” ಎಂದು ಕೂಗುತ್ತಾ ಗ್ರಾಮದ ರಸ್ತೆಗಳಲ್ಲಿ ತಿರುಗಾಡಿದ್ದಾನೆ. ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಮುಂದೆ ನಡೆದ ಈ ಘಟನೆಯ ವಿಡಿಯೋದಲ್ಲಿ ಕೊಂಡ ಗ್ರಾಮಸ್ಥರ ಮೇಲೆ ಹಾವನ್ನು ಎಸೆಯುವಂತೆ ಬೆದರಿಸುತ್ತಿರುವುದು ಕಂಡು ಬಂದಿದೆ.
ಗೊಲ್ಲಪಲ್ಲಿ ಕೊಂಡನ ಈ ಕೃತ್ಯದಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಯಿತು. ವಿಡಿಯೊದಲ್ಲಿ ಆತ ಗ್ರಾಮಸ್ಥರ ಮೇಲೆ ಹಾವನ್ನು ಎಸೆಯಲು ಯತ್ನಿಸುತ್ತಿರುವ ದೃಶ್ಯಗಳಿವೆ. ಈ ಘಟನೆಯ ನಡುವೆ ಹಾವು ಕೊಂಡನನ್ನು ಮತ್ತೊಮ್ಮೆ ಕಚ್ಚಿದ್ದು, ಪರಿಸ್ಥಿತಿಯನ್ನು ಇನ್ನಷ್ಟು ಅಪಾಯಕಾರಿಯಾಗಿಸಿತು. ಗ್ರಾಮಸ್ಥರು ಕೊನೆಗೆ ಹಾವನ್ನು ಕೊಂಡನಿಂದ ಕಿತ್ತುಕೊಂಡು ಕೊಂದು, ಆತನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.
