ಉದಯವಾಹಿನಿ, ತಮ್ಮ ಅಮೋಘ ಅಭಿನಯದಿಂದ ಜನಮನಗೆದ್ದಿರುವ ನಟ ರಮೇಶ್ ಅರವಿಂದ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ರಮೇಶ್ ಅರವಿಂದ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ ದೈಜಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ತಮ್ಮ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಟೀಸರ್ (Teaser) ಬಿಡುಗಡೆ ನಂತರ ದೈಜಿ ಚಿತ್ರತಂಡದವರು ಮಾಧ್ಯಮದವರ ಜೊತೆಗೆ ಮಾತನಾಡಿದರು.
ರಮೇಶ್ ಅರವಿಂದ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಮಾತನಾಡಿದ ನಿರ್ಮಾಪಕ ರವಿ ಕಶ್ಯಪ್, ಹತ್ತು ವರ್ಷಗಳ ಹಿಂದೆ ನಾನು, ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೆ ಈ ಚಿತ್ರದ ಬಗ್ಗೆ ಹೇಳಿದ್ದೆ. ಈಗ ಕಾಲ ಕೂಡಿ ಬಂದಿದೆ. ಇದು ವಿದೇಶದಲ್ಲಿ ನಾನು ಕಂಡಿರುವ ನೈಜ ಘಟನೆ ಆಧರಿತ ಚಿತ್ರ. ಇದನ್ನು ನಾನು ಅಂದುಕೊಂಡಂತೆ ತೆರೆಗೆ ತಂದಿರುವ ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಧನ್ಯವಾದ. ಇನ್ನೂ ಯಾವುದೇ ಹಾಲಿವುಡ್ ಚಿತ್ರಕ್ಕೂ ಕಡಿಮೆ ಇಲ್ಲದಂತೆ ಮೂಡಿಬಂದಿರುವ ನಮ್ಮ ದೈಜಿ ಚಿತ್ರವನ್ನು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ತರುತ್ತೇವೆ ಎಂದರು.
ಸಂಖ್ಯಾಶಾಸ್ತ್ರದ ಪ್ರಕಾರ ಮೂರು ಅಂಕಿಗೂ, ನನಗೂ ಹಾಗೂ ಈ ಚಿತ್ರಕ್ಕೂ ನಂಟಿದೆ. ಹೇಗೆಂದರೆ, ಇದು ನನ್ನ ನಿರ್ದೇಶನದಲ್ಲಿ ರಮೇಶ್ ಅರವಿಂದ್ ಅವರು ನಾಯಕರಾಗಿ ನಟಿಸಿರುವ ಮೂರನೇ ಸಿನಿಮಾ. ನಟಿ ರಾಧಿಕಾ ನಾರಾಯಣ್ ಅವರ ಜೊತೆಗೂ ಮೂರನೇ ಸಿನಿಮಾ. ನನ್ನ ಹಾಗೂ ನಿರ್ಮಾಪಕರ ಮೂರನೇ ಕಾಂಬಿನೇಶನ್ ನ ಚಿತ್ರವೂ ಹೌದು.(ಒಂದು ಕಿರುಚಿತ್ರ). ಹೇಗೆ ಮೂರರ ನಂಟನ್ನು ಸಾಕಷ್ಟು ಉದಾಹರಿಸಬಲ್ಲೆ. ನಿರ್ಮಾಪಕರು ವಿದೇಶದಲ್ಲಿ ತಾವು ಕಂಡ ನೈಜ ಘಟನೆಯನ್ನು ನನಗೆ ಹೇಳಿದರು. ಅವರು ಹೇಳಿದ ಈ ಕಥೆಯೇ ಈ ಚಿತ್ರಕ್ಕೆ ಸ್ಪೂರ್ತಿ. ನಂತರ ಈ ಕಥೆಗೆ ರಮೇಶ್ ಅರವಿಂದ್ ಅವರೆ ಸೂಕ್ತ ಎನಿಸಿ, ಅವರಿಗೆ ಕಥೆ ಹೇಳಿದಾಗ, ಅವರು ನಟಿಸಲು ಒಪ್ಪಿಕೊಂಡಿದ್ದು ಬಹಳ ಖುಷಿಯಾಯಿತು. ಸೂರ್ಯ ಎಂಬ ಪಾತ್ರದಲ್ಲಿ ರಮೇಶ್ ಅವರು ಕಾಣಿಸಿಕೊಂಡಿದ್ದಾರೆ. ರಾಧಿಕಾ ನಾರಾಯಣ್ ಅವರು ಭೂಮಿ ಪಾತ್ರದಲ್ಲಿ ಹಾಗೂ ರಮೇಶ್ ಅವರ ತಮ್ಮನಾಗಿ ನಟ ದಿಗಂತ್ ಗಗನ್ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ದೈಜಿ ಎಂದರೆ ಪ್ರೇತಾತ್ಮಗಳ ದೈವ ಎಂದರ್ಥ. ಇಂದು ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಟ್ರೇಲರ್ ಸಹ ಬರಲಿದ್ದು, ವರ್ಷದ ಕೊನೆ ಅಥವಾ ನೂತನ ವರ್ಷದ ಆರಂಭಕ್ಕೆ ದೈಜಿ ನಿಮ್ಮ ಮುಂದೆ ಬರಲಿದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!