ಉದಯವಾಹಿನಿ, ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ಹೊಸದಾಗಿ ಜಾತಿ ಜನಗಣತಿ ನಡೆಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಸೆಪ್ಟೆಂಬರ್‌ 22ರಿಂದ ಅಕ್ಟೋಬರ್‌ 7ರ ವರೆಗೆ ಮಧುಸೂದನ್ ನಾಯಕ್ ಸಮಿತಿ ನೇತೃತ್ವದಲ್ಲಿ ಸಮೀಕ್ಷೆ ನಡೆಯಲಿದೆ. ಮರು ಸಮೀಕ್ಷೆಗೆ ಸದ್ಯ 420 ಕೋಟಿ ರೂ. ಖರ್ಚಾಗಲಿದ್ದು, ಅಗತ್ಯಬಿದ್ದರೆ ಹೆಚ್ಚಿನ ಅನುದಾನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು. ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸುವ ಉದ್ದೇಶದಿಂದ ಈ ಗಣತಿ ಮುಖ್ಯವಾಗಿದ್ದು, ಎಲ್ಲಾ ನಾಗರಿಕರೂ ಪಾಲ್ಗೊಳ್ಳಬೇಕು, ಸಮೀಕ್ಷೆಯಲ್ಲಿ ಕೇಳುವ 60 ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಜಾತಿ ಜನಗಣತಿ ವರದಿ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು. ಸಮಾಜದಲ್ಲಿ ಅನೇಕ ಜಾತಿ, ಧರ್ಮಗಳಿವೆ. ವೈರುಧ್ಯ, ಅಸಮಾನತೆ ಇದೆ. ಆದ್ರೆ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ, ಸಾಮಾಜಿಕ ನ್ಯಾಯ ಕೊಡಬೇಕು ಅಂತ ಹೇಳುತ್ತೆ. ಅಂಬೇಡ್ಕರ್ ಕೂಡ ಇದನ್ನೇ ಹೇಳಿದ್ದಾರೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಅಸಮಾನತೆ ಇದೆ ಅಂತ ಅಂಬೇಡ್ಕರ್ ಹೇಳಿದ್ರು. ಈ ಪ್ರಜಾಪ್ರಭುತ್ವ ಉಳಿಯಬೇಕಾದ್ರೆ ಅಸಮಾನತೆ ಹೋಗಲಾಡಿಸಬೇಕು. ಅಸಮಾನತೆ ಇದ್ದರೆ ಅದರಿಂದ ನರಳೊ ಜನರು ಪ್ರಜಾಪ್ರಭುತ್ವದ ಸೌಧ ಧ್ವಂಸ ಮಾಡ್ತಾರೆ ಅಂತ ಹೇಳಿದ್ರು. ಹಾಗಾಗಿ ಸಮಾಜದಲ್ಲಿ ಅಸಮಾನತೆ ಉಳಿಯಲು ಅವಕಾಶ ಕೊಡಬಾರದು ಎಂದು ಸಿಎಂ ಕಿವಿಮಾತು ಹೇಳಿದರು.

Leave a Reply

Your email address will not be published. Required fields are marked *

error: Content is protected !!