ಉದಯವಾಹಿನಿ,ಭುವನೇಶ್ವರ್: ಒಡಿಶಾ ರೈಲು ದುರಂತ ತಿಂಗಳು ಕಳೆಯುತ್ತಿದ್ದರೂ ನಿಲ್ಲದ ವೇದನೆ. ಸಂಬಂಧಿಕರು ಶವಗಳಿಗಾಗಿ ಕಾಯುತ್ತಿದ್ದು ದೊರಕದ ಕಾರಣ ರೋದಿಸುತ್ತಿದ್ದಾರೆ. ಸುಮಾರು 300 ಜೀವಗಳನ್ನು ಬಲಿತೆಗೆದುಕೊಂಡ ಭೀಕರ ರೈಲು ಅಪಘಾತ ಸಂಭವಿಸಿ ಸುಮಾರು ನಾಲ್ಕು ವಾರವಾದರ ಮೃತರ ಸಂಬಂಧಿಕರ ದುಃಖ ಮತ್ತು ವೇದನೆ ಇನ್ನೂ ಕಡಿಮೆಯಾಗಿಲ್ಲ. ಜೂನ್ 2 ರಂದು ನಡೆದ ಒಡಿಶಾ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಮೃತ ದೇಹ ಪಡೆಯಲು ಸಂತ್ರಸ್ತರ ಬಂಧುಗಳು ಇನ್ನೂ ಕಾಯುತ್ತಿದ್ದಾರೆ. ಬಿಹಾರದ ಬೇಗುಸರಾಯ್ ಜಿಲ್ಲೆಯ ಬರಿ-ಬಲ್ಲಿಯಾ ಗ್ರಾಮದ ಬಸಂತಿ ದೇವಿ ತನ್ನ ಪತಿಯ ಮೃತದೇಹವನ್ನು ಪಡೆಯಲು ಕಳೆದ 10 ದಿನಗಳಿಂದ ಏಮ್ಸ್ ಬಳಿಯ ಅತಿಥಿ ಗೃಹದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಗುತ್ತಿಗೆ ಕಾರ್ಮಿಕನಾಗಿದ್ದ ನನ್ನ ಪತಿ ಯೋಗೇಂದ್ರ ಪಾಸ್ವಾನ್‌ಗಾಗಿ ಇಲ್ಲಿದ್ದೇನೆ. ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಬಹನಾಗಾ ಬಜಾರ್‌ನಲ್ಲಿ ಅಪಘಾತದಲ್ಲಿ ಅವರು ಸಾವನ್ನಪ್ಪಿದರು ಎಂದು ಪತಿಯ ಶವಕ್ಕಾಗಿ ಕಾಯುತ್ತಿರುವ ಮಹಿಳೆ ನೋವು ವ್ಯಕ್ತ ಪಡಿಸಿದ್ದಾರೆ. ಶವ ಯಾವಾಗ ದೊರೆಯಲಿದೆ ಎಂಬ ಬಗ್ಗೆ ಅಧಿಕಾರಿಗಳು ನಿಖರ ಮಾಹಿತಿ ನೀಡುತ್ತಿಲ್ಲ ಎಂದಿದ್ದಾರೆ. ಕೆಲವು ಅಧಿಕಾರಿಗಳು ಇನ್ನೂ 5 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರೆ, ಮತ್ತೆ ಕೆಲವರು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಹೇಳುತ್ತಾರೆ. ಸ್ಥಳೀಯ ಆಡಳಿತದಿಂದ ಯಾವುದೇ ಸ್ಪಷ್ಟತೆ ಇಲ್ಲ ಎಂದು ಅವರು ಹೇಳಿದರು.
