ಉದಯವಾಹಿನಿ, ರಾಮನಗರ: ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ ವಿರೋಧಿಸಿ ರೈತರ ಅಹೋರಾತ್ರಿ ಧರಣಿ ಮುಂದುವರೆದಿದ್ದು, 5ನೇ ದಿನಕ್ಕೆ ರೈತರ ಹೋರಾಟ ಕಾಲಿಟ್ಟಿದೆ. ಬಿಡದಿಯ ಭೈರಮಂಗಲ ಗ್ರಾಮದಲ್ಲಿ ನಡೆಯುತ್ತಿರೋ ಪ್ರತಿಭಟನೆಗೆ ಇಂದು ವಿಪಕ್ಷ ನಾಯಕ ಅಶೋಕ್, ಮಾಜಿ ಡಿಸಿಎಂ ಅಶ್ವಥ್ ನಾರಾಯಣಗೌಡ ಹಾಗೂ ಸಂಸದ ಡಾ.ಮಂಜುನಾಥ್ ಸಾಥ್ ನೀಡಿದ್ದಾರೆ.ಗ್ರಾಮಕ್ಕೆ ಎತ್ತಿನಬಂಡಿಯಲ್ಲಿ ಆಗಮಿಸಿದ ಆರ್.ಅಶೋಕ್ ರೈತರ ಜೊತೆ ಕೂತು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಯಾವುದೇ ಕಾರಣಕ್ಕೂ ಟೌನ್‌ಶಿಪ್ ಯೋಜನೆಗೆ ಕೃಷಿ ಭೂಮಿ ಬಳಕೆ ಮಾಡಬಾರದು. ರೈತರನ್ನ ಒಕ್ಕಲೆಬ್ಬಿಸುವ ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ಮಾಡೋಣ. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇನೆ. ರೈತರ ಪರವಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಅಶೋಕ್ ರೈತರಿಗೆ ಭರವಸೆ ನೀಡಿದರು.
ಇನ್ನೂ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ನಾಯಕರು ಮಾತನಾಡುತ್ತಿರುವಾಗಲೇ, ರೈತರು ಭೂಸ್ವಾಧೀನ ವಿರೋಧಿಸಿ ಆತ್ಮಹತ್ಯೆಗೆ ಯತ್ನಿಸಿದರು. ಇಬ್ಬರು ರೈತ ಮಹಿಳೆಯರು ಹಾಗೂ ಓರ್ವ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಈ ವೇಳೆ ಕೂಡಲೇ ಪೊಲೀಸರು ರೈತರ ಕೈಯಿಂದ ಕ್ರಿಮಿನಾಶಕದ ಬಾಟಲಿಗಳನ್ನ ಕಿತ್ತು ಬಿಸಾಕಿದರು. ವಿಷ ಕುಡಿಯಲು ಯತ್ನಿಸಿದವರನ್ನು ಅಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಯಿತು.
