ಉದಯವಾಹಿನಿ,ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಕಾರ್ಯ ತಂತ್ರ ರೂಪಿಸಲು ಬಿಜೆಪಿಯ ಹಿರಿಯ ನಾಯಕರು ಬುಧವಾರ ರಾತ್ರಿ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಸಭೆ ನಡೆದಿದ್ದು, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ಇತರೆ ಕೆಲವು ಹಿರಿಯ ನಾಯಕರು ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ಅವರು ಅಮೆರಿಕ ಹಾಗೂ ಈಜಿಪ್ಟ್ ಪ್ರವಾಸ ಮುಗಿಸಿ ಬಂದ ಕೆಲವೇ ದಿನಗಳಲ್ಲಿ ಈ ಸಭೆ ನಡೆದಿದೆ. ಒಂದೆಡೆ ವಿರೋಧ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಮಹಾ ಮೈತ್ರಿಕೂಟ ರಚಿಸುವ ಪ್ರಯತ್ನದಲ್ಲಿ ಇರುವಾಗ, ಬಿಜೆಪಿ ಅದಕ್ಕೆ ಎದಿರೇಟು ನೀಡುವ ಕಾರ್ಯತಂತ್ರ ರೂಪಿಸಲು ಮುಂದಾಗಿದೆ. ಸುಮಾರು ಐದು ಗಂಟೆಗೂ ಹೆಚ್ಚು ಸಮಯ ನಡೆದ ಈ ಸಭೆಯಲ್ಲಿ ಶೀಘ್ರದಲ್ಲಿಯೇ ಕೇಂದ್ರ ಸಂಪುಟದಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಬಗ್ಗೆ ಕೂಡ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ರಾಷ್ಟ್ರವ್ಯಾಪಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸರ್ಕಾರ ಮುಂದಾಗಲಿದೆ ಎಂದು ತಿಳಿಸಿದ್ದರು. ಸಮಾನ ನಾಗರಿಕ ಕಾನೂನು ಬಿಜೆಪಿಯ ಪ್ರಣಾಳಿಕೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶವಾಗಿದೆ. ಈ ಬಾರಿ ಚುನಾವಣೆಯಲ್ಲಿ ಪ್ರಮುಖ ವಿಷಯವನ್ನಾಗಿ ಯುಸಿಸಿ ಪ್ರಸ್ತಾಪವಾಗುವ ನಿರೀಕ್ಷೆ ಇದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅನುಭವಿಸಿದ ಹೀನಾಯ ಸೋಲು, ಕೇಂದ್ರ ನಾಯಕರಲ್ಲಿ ಕಳವಳ ಮೂಡಿಸಿದೆ. ಈ ವರ್ಷದ ಕೊನೆ ಹಾಗೂ ಮುಂದಿನ ವರ್ಷದಲ್ಲಿ ಲೋಕಸಭೆ ಚುನಾವಣೆ ವೇಳೆ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ತನ್ನ ಪ್ರಚಾರ ಸ್ವರೂಪವನ್ನು ಬದಲಿಸಲು ಬಿಜೆಪಿ ಆಲೋಚನೆ ನಡೆಸಿದೆ.
