ಉದಯವಾಹಿನಿ, ಬೆಂಗಳೂರು: ಪದವಿ ಮತ್ತು ಮತ್ತು ಸ್ನಾತಕೋತ್ತರ ಪದವಿಯ ನಕಲಿ ಮಾರ್ಕ್ಸ್ ಕಾರ್ಡ್ ಮತ್ತು ಓಯೋ ರೂಮ್ಗಳಿಗಾಗಿ ನಕಲಿ ಆಧಾರ್ ಕಾರ್ಡ್ ಸಿದ್ಧಪಡಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗುಂಪೊಂದು ಪೊಲೀಸರ ಬಲೆಗೆ ಬಿದ್ದಿದೆ.
ಸೈಬರ್ ಸೆಂಟರ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಇಬ್ಬರನ್ನು ಹೆಬ್ಬಗೋಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಯಶವಂತ್, ರಘುವೀರ್ ಎಂದು ಗುರುತಿಸಲಾಗಿದೆ. ನಕಲಿ ಮಾರ್ಕ್ಸ್ ಕಾರ್ಡ್ ರೇಟ್ ಫಿಕ್ಸ್: ಆರೋಪಿಗಳು ಹೆಬ್ಬಗೋಡಿಯಲ್ಲಿ ಗುರುದತ್ತ ಸೈಬರ್ ಸೆಂಟರ್ ಹೆಸರಲ್ಲಿ ಈ ನಕಲಿ ದಂಧೆ ನಡೆಸುತ್ತಿದ್ದರು. ಒಂದೊಂದು ಮಾರ್ಕ್ಸ್ ಕಾರ್ಡ್ಗಳಿಗೂ ಒಂದೊಂದು ರೇಟ್ ಫಿಕ್ಸ್ ಮಾಡಿದ್ದರು ಎನ್ನಲಾಗಿದೆ.
ಓಯೋ ರೂಮ್ಗಳಿಗಾಗಿ ನಕಲಿ ಆಧಾರ್ ಕಾರ್ಡ್: ಅಷ್ಟೇ ಅಲ್ಲದೆ ಆರೋಪಿಗಳು ಓಯೋ ರೂಮ್ಗಳಿಗೆ ಹೋಗುವವರಿಗೆ ನಕಲಿ ಆಧಾರ್ ಕಾರ್ಡ್ಗಳನ್ನು ನೀಡುತ್ತಿದ್ದರು. ಯಾವುದೇ ವಿಶ್ವವಿದ್ಯಾಲಯದ ಮಾರ್ಕ್ಸ್ ಕಾರ್ಡ್ ಬೇಕಿದ್ದರೂ ಗ್ಯಾಂಗ್ ಮಾಡಿಕೊಡುತ್ತಿತ್ತು. ಆದರೆ, ಒಂದೊಂದಕ್ಕೆ ಒಂದೊಂದು ರೇಟ್ ಫಿಕ್ಸ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿವಿಗಳ ಸೀಲು, ನಕಲಿ ಅಂಕಪಟ್ಟಿ ವಶಕ್ಕೆ: ಆರೋಪಿಗಳ ಬಳಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದ ಪ್ರಸಿದ್ಧ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕಾ ಮಂಡಳಿ ಸೇರಿದಂತೆ ಅನೇಕ ಸರ್ಕಾರಿ ಸೀಲುಗಳು ಪತ್ತೆಯಾಗಿವೆ. ಜೊತೆಗೆ ಎಂಟು ನಕಲಿ ಮಾಕ್ಸ್ ಕಾರ್ಡ್, ಏಳು ನಕಲಿ ಆಧಾರ್ ಕಾರ್ಡ್ಗಳು, ಕಂಪ್ಯೂಟರ್ ಸೇರಿದಂತೆ ಕೆಲ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಕಲಿ ಮಾರ್ಕ್ಸ್ ಕಾರ್ಡ್, ಆಧಾರ್ ಕಾರ್ಡ್ ಮಾಡುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಬ್ಬುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯಾರಿಗೆಲ್ಲ ನಕಲಿ ದಾಖಲೆಗಳನ್ನು ನೀಡಿದ್ದಾರೆ ಎಂದು ವಿಚಾರಣೆ ನಡೆಯುತ್ತಿದೆ.ಇನ್ನು ಪ್ರತ್ಯೇಕ ಘಟನೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಿರ್ಮಾಪಕನ ವಿರುದ್ಧ ಬೆಳ್ಳಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಲು ಯತ್ನಿಸಿದ್ದಾರೆ ಎಂದು ರೈತರೊಬ್ಬರು ದೂರಿ, ದಿಯಾ ಸಿನಿಮಾ ನಿರ್ಮಾಪಕ ಕೃಷ್ಣಚೈತನ್ಯ ಹಾಗೂ ಅವರ ಸಹಚರರ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
