ಉದಯವಾಹಿನಿ, ಮಿಜೋರಾಂ ರಾಜಧಾನಿ ಐಜ್ವಾಲ್ ಅನ್ನು ದೆಹಲಿಯೊಂದಿಗೆ ಸಂಪರ್ಕಿಸುವ ರಾಜ್ಯದ ಮೊದಲ ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ಸೆ.13ರಂದು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದಾರೆ. ಈ ಮೂಲಕ ಅಲ್ಲಿನ ಜನತೆಯ ದಶಕದ ಕನಸು ನನಸಾಗಿದೆ. ಅಲ್ಲದೇ ಐಜ್ವಾಲ್ ನಗರ ಮೊಟ್ಟ ಮೊದಲ ಬಾರಿಗೆ ಭಾರತೀಯ ರೈಲ್ವೆ ಜಾಲ ಸೇರಿಕೊಂಡಿದೆ. ಮಿಜೋರಾಂ ಗುಡ್ಡಗಾಡಿನಿಂದ ಕೂಡಿದ ಪ್ರದೇಶವಾಗಿದ್ದು, ಇಲ್ಲಿ ರೈಲು ಮಾರ್ಗ ನಿರ್ಮಾಣ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಇದೀಗ ನಿಧಾನಗತಿಯಲ್ಲಿ ಸಾಗಿದ್ದ ರೈಲ್ವೆ ಕಾಮಗಾರಿ 11 ವರ್ಷಗಳ ಬಳಿಕ ಪೂರ್ಣಗೊಂಡಿದೆ. ಹಾಗಿದ್ರೆ ಇದರ ವಿಶೇಷತೆ ಏನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
ಬೈರಾಬಿ- ಸೈರಾಂಗ್ ನಡುವಿನ ಈ ರೈಲು ಮಾರ್ಗವನ್ನು ಸೆ.13 ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ದುರ್ಗಮ ಗುಡ್ಡಗಾಡು ಪ್ರದೇಶ, ಆಳವಾದ ಕಂದಕ, ಕಣಿವೆಗಳಿಂದ ಕೂಡಿರುವ ಈಶಾನ್ಯ ರಾಜ್ಯದಲ್ಲಿರೈಲು ಮಾರ್ಗ ಕಾರ್ಯಗತಗೊಂಡಿದ್ದೇ ದೊಡ್ಡ ಸಾಹಸ. ಮೊದಲು ಸಿಲ್ಚಾರ್‌ನಿಂದ ಐಜ್ವಾಲ್‌ಗೆ 8-10 ಗಂಟೆ ಪ್ರಯಾಣ ಮಾಡಬೇಕಿತ್ತು. ಈಗ ಕೇವಲ 4 ಗಂಟೆಯಲ್ಲಿ ಐಜ್ವಾಲ್ ತಲುಪಬಹುದು.
8,070 ಕೋಟಿ ರೂ. ವೆಚ್ಚದ ಯೋಜನೆ: ಭಾರತೀಯ ರೈಲ್ವೆ (ಎನ್‌ಎಫ್‌ಆರ್) ಈ ನೂತನ ರೈಲು ಮಾರ್ಗವನ್ನು ನಿರ್ಮಿಸಿದೆ. ಅಸ್ಸಾಂ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಈ ರಾಜ್ಯದ ಗಡಿ ಭಾಗದವರೆಗೆ ರೈಲ್ವೆ ಸಂಪರ್ಕ ಈ ಹಿಂದೆಯೇ ಇತ್ತು. ಆದರೆ, ರಾಜ್ಯದೊಳಗೆ ಇನ್ನೂ ರೈಲು ಸಂಪರ್ಕ ಕಲ್ಪಿಸಿರಲಿಲ್ಲ. ಈಗ ರಾಜ್ಯದೊಳಗೆ ರೈಲಿನ ಸದ್ದು ಮೊಳಗಲಿದೆ. 2014ರ ನವೆಂಬರ್ 29ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಿಜೋರಾಂ ರಾಜ್ಯದಲ್ಲಿ ಬೈರಾಬಿಯಿಂದ ಸೈರಾಂಗ್ ತನಕ ಹೊಸ ರೈಲು ಮಾರ್ಗದ ಶಿಲಾನ್ಯಾಸ ನೆರವೇರಿಸಿದ್ದರು. 2016ರ ಮಾ.21ರಂದು ಅಸ್ಸಾಂನಿಂದ ಬೈರಾಬಿವರೆಗೆ ರೈಲು ಮಾರ್ಗವನ್ನು ಬ್ರಾಡ್‌ಗೇಜ್‌ಗೆ ಪರಿವರ್ತನೆ ಮಾಡುವ ಮೂಲಕ ಮಿಜೋರಾಂನ ಬೈರಾಬಿಗೆ ಮೊದಲ ರೈಲು ತಲುಪಿತು. ಈ ಯೋಜನೆಗೆ 8,070 ಕೋಟಿ ರೂ. ವೆಚ್ಚವಾಗಿದೆ.
