ಉದಯವಾಹಿನಿ, ಡೆಹ್ರಾಡೂನ್: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ 15 ಮಂದಿ ಸಾವನ್ನಪ್ಪಿದ್ದು, 16 ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಸೋಮವಾರ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು , ಹಲವಾರು ರಸ್ತೆ, ಮನೆ ಮತ್ತು ಅಂಗಡಿಗಳು ಹಾನಿಗೊಳಗಾಗಿವೆ. ರಾಜ್ಯದ ಹಲವಾರು ಭಾಗಗಳಲ್ಲಿ ಮಂಗಳವಾರ ಮೇಘಸ್ಫೋಟ ಉಂಟಾಗಿ ಮತ್ತು ಭಾರೀ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಚಮೋಲಿ, ಚಂಪಾವತ್, ಡೆಹ್ರಾಡೂನ್, ನೈನಿತಾಲ್, ಪೌರಿ ಗರ್ವಾಲ್, ಪಿಥೋರಗಢ, ರುದ್ರಪ್ರಯಾಗ, ತೆಹ್ರಿ ಗರ್ವಾಲ್ ಮತ್ತು ಉತ್ತರಕಾಶಿ ಜಿಲ್ಲೆಗಳು ಅಪಾಯದಲ್ಲಿವೆ.
ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ಮತ್ತು ಇತರ ಹಲವಾರು ಭಾಗಗಳಲ್ಲಿ ಮಂಗಳವಾರ ಮೇಘಸ್ಫೋಟ ಉಂಟಾಗಿ ಭಾರೀ ಮಳೆಯಾಗಿದ್ದು, ಅಪಾರ ಹಾನಿ ಸಂಭವಿಸಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಕಟ್ಟಡ, ರಸ್ತೆ ಮತ್ತು ಸೇತುವೆಗಳು ಕೊಚ್ಚಿ ಹೋಗಿವೆ. ಇದರಿಂದಾಗಿ 15 ಜನರು ಸಾವನ್ನಪ್ಪಿದ್ದಾರೆ. 16 ಮಂದಿ ಕಾಣೆಯಾಗಿದ್ದಾರೆ. ಬೆಟ್ಟದ ರಾಜ್ಯದ ವಿವಿಧ ಸ್ಥಳಗಳಲ್ಲಿ 900ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ. ಈ ನಡುವೆ ಮುಂದಿನ 24 ಗಂಟೆಗಳಲ್ಲಿ ದಿಢೀರ್ ಪ್ರವಾಹ ಉಂಟಾಗುವ ಸಾಧ್ಯತೆ ಕಡಿಮೆ ಇದೆ ಎಂದು ಐಎಂಡಿ ಹೇಳಿದ್ದು, ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ಡೆಹ್ರಾಡೂನ್‌ನಲ್ಲಿ 13 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಎಂಟು ನಿವಾಸಿಗಳು ಸೇರಿದ್ದಾರೆ. ನೈನಿತಾಲ್ ಮತ್ತು ಉಧಮ್ ಸಿಂಗ್ ನಗರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಉತ್ತರಾಖಂಡ್ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
