ಉದಯವಾಹಿನಿ, ಅಟ್ಲಾಂಟ: ಭಾರತೀಯರನ್ನು ಜಾರ್ಜಿಯಾದಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯೊಬ್ಬರು ದೂರಿದ್ದಾರೆ. ಆರ್ಮೇನಿಯಾದಿಂದ ಸಡಖ್ಲೋ ಗಡಿಯ ಮೂಲಕ ಜಾರ್ಜಿಯಾಕ್ಕೆ ಪ್ರವೇಶಿಸಿದ 56 ಭಾರತೀಯರನ್ನು ದನಗಳಂತೆ ಪಾದಚಾರಿ ಮಾರ್ಗದಲ್ಲಿ ಕುಳಿತುಕೊಳ್ಳಲು ಒತ್ತಾಯಿಸಲಾಗಿದೆ. ಇದರಲ್ಲಿ ತಾನು ಇದ್ದೆ ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಮಹಿಳೆ ತಿಳಿಸಿದ್ದು, ಇದು ಭಾರಿ ವೈರಲ್ ಆಗಿದೆ.
ಮಾನ್ಯವಾದ ಇ-ವೀಸಾ, ದಾಖಲೆಗಳು ಇದ್ದರು ಕೂಡ ಅರ್ಮೇನಿಯಾದ ಸಡಖ್ಲೋ ಗಡಿಯಿಂದ ಜಾರ್ಜಿಯಾಕ್ಕೆ ಪ್ರವೇಶಿಸಲು ಪ್ರಯತ್ನಿಸುವಾಗ 56 ಭಾರತೀಯರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಈ ಕುರಿತು ಭಾರತೀಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಗಡಿಯಲ್ಲಿ ಪರಿಸ್ಥಿತಿ ಅತ್ಯಂತ ಕಠಿಣವಾಗಿತ್ತು. ಯಾವುದೇ ರೀತಿಯ ಸಂವಹನವನ್ನು ಮಾಡಲು ಬಿಡದೆ ಗಂಟೆಗಟ್ಟಲೆ ದಾರಿಯಲ್ಲಿ ಕಾಯುವಂತೆ ಮಾಡಲಾಯಿತು ಎಂದು ಅವರು ದೂರಿದ್ದಾರೆ. ಅರ್ಮೇನಿಯಾದಿಂದ ಸಡಖ್ಲೋ ಗಡಿಯ ಮೂಲಕ ಜಾರ್ಜಿಯಾ ಪ್ರವೇಶಿಸಿದ ಭಾರತೀಯರಿಗೆ ಆಹಾರ ನೀಡದೆ, ಶೌಚಾಲಯದ ವ್ಯವಸ್ಥೆ ಇಲ್ಲದೆ ಐದು ಗಂಟೆಗಳಿಗಿಂತ ಹೆಚ್ಚು ಕಾಲ ಶೀತ ವಾತಾವರಣದಲ್ಲಿ ಕಾಯಿಸಲಾಯಿತು. ನಮ್ಮ ಪಾಸ್‌ಪೋರ್ಟ್‌ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಎರಡು ಗಂಟೆಗಳಿಗೂ ಹೆಚ್ಚು ಕಾಲ ಕಾಯುವಂತೆ ಮಾಡಿದರು ಎಂದು ಅವರು ಹೇಳಿದ್ದಾರೆ.
ʼʼನಮ್ಮನ್ನು ದನಗಳಂತೆ ಫುಟ್‌ಪಾತ್‌ನಲ್ಲಿ ಕುಳಿತುಕೊಳ್ಳಲು ಒತ್ತಾಯಿಸಲಾಗಿದೆ. ಅಪರಾಧಿಗಳಂತೆ ನಡೆಸಿಕೊಂಡರು. ನಮ್ಮ ಕ್ಯಾಮರಾ ಪಡೆದು ನಾವು ಯಾವುದೇ ರೀತಿಯ ಚಿತ್ರೀಕರಣ ಮಾಡದಂತೆ ತಡೆದರು. ನಮ್ಮ ದಾಖಲೆಗಳನ್ನು ಕೂಡ ಪರಿಶೀಲಿಸಲಿಲ್ಲ, ವೀಸಾಗಳು ಸುಳ್ಳು ಎಂದು ಹೇಳಿಕೊಂಡರುʼʼ ಎಂಬುದಾಗಿ ಅವರು ವಿವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!