ಉದಯವಾಹಿನಿ, ನವದೆಹಲಿ: ವ್ಯಾಪಾರ ಸುಂಕಗಳ ಕಾರಣಕ್ಕೆ ಭಾರತದ ವಿರುದ್ಧ ಮುನಿಸಿಕೊಂಡಿದ್ದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump), ಇಂದು ಪ್ರಧಾನಿ ನರೇಂದ್ರ ಮೋದಿ ಅವರು 75ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯ ಸಲ್ಲಿಸುವುದು ಮರೆಯಲಿಲ್ಲ. ನಿನ್ನೆ ರಾತ್ರಿ ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿದ ಟ್ರಂಪ್‌, ಬರ್ತ್‌ಡೇ ವಿಶಸ್‌ ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್‌ ಅವರ ಶುಭಾಶಯಗಳಿಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಧನ್ಯವಾದ ಅರ್ಪಿಸಿದರು.

Xನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಅಧ್ಯಕ್ಷ ಟ್ರಂಪ್‌ಗೆ ಧನ್ಯವಾದ ಹೇಳುತ್ತಾ, ನಿಮ್ಮ ಕರೆ ಮತ್ತು ಹುಟ್ಟುಹಬ್ಬದ ಶುಭಾಶಯಗಳಿಗೆ ಧನ್ಯವಾದಗಳು. ನಿಮ್ಮಂತೆಯೇ, ಭಾರತ-ಯುಎಸ್‌ಎ ನಡುವಿನ ಸಮಗ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರಕ್ಕಾಗಿ ನಿಮ್ಮ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ ಎಂದು ಬರೆದಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗಿನ ತಮ್ಮ ಸಂಭಾಷಣೆಯನ್ನು ಸಾಮಾಜಿಕ ಮಾಧ್ಯಮ ʼಟ್ರುತ್‌ʼನಲ್ಲಿ ಹಂಚಿಕೊಂಡ ಅಧ್ಯಕ್ಷ ಟ್ರಂಪ್, ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅದ್ಭುತವಾದ ಸಂಭಾಷಣೆ ನಡೆಯಿತು. ನಾನು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ನೀವು ನೀಡಿದ ಬೆಂಬಲಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ.

ಪ್ರಧಾನಿ ಮೋದಿ ಅವರ ಈ ಸಂದೇಶ, ಅಮೆರಿಕವು ಭಾರತದ ಮೇಲೆ ತೀವ್ರ ವ್ಯಾಪಾರ ಸುಂಕಗಳನ್ನು ವಿಧಿಸಿರುವ ಸಮಯದಲ್ಲಿ ಬಂದಿದೆ. ಭಾರತೀಯ ಆಮದುಗಳ ಮೇಲೆ ಶೇ. 50 ರಷ್ಟು ಸುಂಕವನ್ನು ವಿಧಿಸಲಾಗಿದೆ. ಇದರಲ್ಲಿ ದೆಹಲಿಯು ರಷ್ಯಾದಿಂದ ಖರೀದಿಸುವ ತೈಲದ ಮೇಲಿನ ಶೇ. 25ರಷ್ಟು ಸುಂಕ ಸೇರಿದೆ. ಇದು ಯಾವುದೇ ದೇಶದ ಮೇಲೆ ವಿಧಿಸಲಾದ ಅತ್ಯಧಿಕ ಸುಂಕಗಳಲ್ಲಿ ಒಂದಾಗಿದೆ. ಇದರ ನಂತರ ಈ ವಾರದ ಆರಂಭದಲ್ಲಿ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರು ಅಮೆರಿಕದಲ್ಲಿ ಬೆಳೆದ ಜೋಳವನ್ನು ಖರೀದಿಸಲು ನಿರಾಕರಿಸಿದರೆ, ಅಮೆರಿಕದ ಮಾರುಕಟ್ಟೆಗೆ ಭಾರತ ಪ್ರವೇಶ ಕಳೆದುಕೊಳ್ಳಬಹುದು ಎಂದು ಎಚ್ಚರಿಕೆ ನೀಡಿದ್ದರು.

 

Leave a Reply

Your email address will not be published. Required fields are marked *

error: Content is protected !!