ಉದಯವಾಹಿನಿ, ನ್ಯೂಯಾರ್ಕ್: ಹೊಸ ಮನೆ ನಿರ್ಮಾಣ ಹಲವರ ಕನಸಾಗಿರುತ್ತದೆ. ಈ ಕನಸನ್ನು ನನಸಾಗಿಸಲು ಅದೆಷ್ಟೋ ಮಂದಿ ಕಷ್ಟಪಡುತ್ತಿದ್ದಾರೆ. ಈ ಮಧ್ಯೆ ಇಲ್ಲೊಂದು ದಂಪತಿ ಹಳೇ ಬಸ್ ಅನ್ನು ಸುಂದರವಾದ ಮನೆಯನ್ನಾಗಿ ಪರಿವರ್ತಿಸಿದ್ದಾರೆ. ಅಮೆರಿಕ (America) ದ ಪಾಲ್ ಮತ್ತು ಶೇ ಎಂಬ ದಂಪತಿ 2006ರ ಶಾಲಾ ಬಸ್ ಅನ್ನು ಮನೆಯಾಗಿ ಪರಿವರ್ತಿಸುವ ಮೂಲಕ ಈ ಕನಸನ್ನು ನನಸಾಗಿಸಿದ್ದಾರೆ. ಇದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ.ಈ ಜೋಡಿ ತಮ್ಮ ಮೂರು ವರ್ಷಗಳ ಅದ್ಭುತ ಯೋಜನೆಯ ಬಗ್ಗೆ ಒಂದು ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಬಹಳ ಸ್ಪೂರ್ತಿದಾಯಕವಾಗಿದೆ. ಪ್ರಯಾಣ, ಕೆಲಸ ಮತ್ತು ದೈನಂದಿನ ಜೀವನಕ್ಕಾಗಿ ಸಂಪೂರ್ಣವಾಗಿ ವಿನ್ಯಾಸಗೊಳಿಸಲಾದ ಹಳದಿ ಬಣ್ಣದ ಬಸ್ ಅನ್ನು ಯಾವ ರೀತಿ ರೂಪಾಂತರಗೊಳಿಸಿದ್ದಾರೆ ಎಂಬುದನ್ನು ವಿಡಿಯೊದಲ್ಲಿ ನೋಡಬಹುದು.
ಮುಂಭಾಗದಲ್ಲಿ ರ್ಯಾಕ್, ಟೈರ್‌ಗಳು ಮತ್ತು ಭದ್ರತಾ ಕ್ಯಾಮರಾವನ್ನು ಇಡಲಾಗಿದೆ. ಪಾಲ್ ಮತ್ತು ಶೇ ದಂಪತಿಯು ಹೊರಾಂಗಣ ಲೌಂಜ್ ಪ್ರದೇಶವನ್ನು ರಚಿಸಲು 15 ಅಡಿ ಮ್ಯಾನುವಲ್ ಸನ್‌ಶೇಡ್ ಅನ್ನು ಅಳವಡಿಸಿದರು. ಛಾವಣಿಯ ಮೇಲೆ ಅವರು ಮರದ ಡೆಕ್ ಅನ್ನು ನಿರ್ಮಿಸಿದರು. ಮನೆಯಾಗಿ ಪರಿವರ್ತಿಸಿದ್ದರೂ ಬಸ್ ಚಾಲನೆಗೆ ಯೋಗ್ಯವಾಗಿದೆ. ಹೀಗಾಗಿ ಪ್ರಯಾಣದಲ್ಲಿರುವಾಗ ಸಂಪರ್ಕಕ್ಕಾಗಿ WeBoost ಸೆಲ್ ಸಿಗ್ನಲ್ ಬೂಸ್ಟರ್ ಮತ್ತು ನಾಲ್ಕು 450-ವ್ಯಾಟ್ ಸೌರ ಫಲಕಗಳನ್ನು ಸಹ ಅಳವಡಿಸಲಾಗಿದೆ. 42 ಅಡಿ ಉದ್ದದ ಬಸ್‌ನ ಒಳಾಂಗಣವನ್ನು ಬಹಳ ಸುಂದರವಾಗಿ ನಿರ್ಮಿಸಲಾಗಿದೆ.
