ಉದಯವಾಹಿನಿ, ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನಾ ಅವರು ಶತಕವನ್ನು ಬಾರಿಸಿದ್ದಾರೆ. ಅವರು ತಮ್ಮ ಮಹಿಳಾ ಏಕದಿಕ ಕ್ರಿಕೆಟ್ ವೃತ್ತಿ ಜೀವನದಲ್ಲಿ 12ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಸ್ಪೋಟಕ ಬ್ಯಾಟ್ ಮಾಡಿದ ಇವರು ಕೇವಲ 77 ಎಸೆತಗಳಲ್ಲಿಯೇ ಶತಕವನ್ನು ಸಿಡಿಸಿದರು. ಆ ಮೂಲಕ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ವೇಗದ ಶತಕವನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕೂ ಮುನ್ನ ಇವರು ಈ ವರ್ಷದಲ್ಲಿ ಐರ್ಲೆಂಡ್ ವಿರುದ್ಧ ಕೇವಲ 70 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದರು. ಇದೀಗ ಎರಡನೇ ವೇಗದ ಶತಕವನ್ನು ಕೂಡ ಇವರೇ ಬಾರಿಸಿದ್ದಾರೆ.
ಮುಲ್ಲಾನ್‌ಪುರದ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತದ ಪರ ಇನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನಾ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ 91 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 14 ಬೌಂಡರಿಗಳೊಂದಿಗೆ 117 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಭಾರತ ತಂಡ, 49.5 ಓವರ್‌ಗಳಲ್ಲಿ 292 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು.
ತಮ್ಮ ಸ್ಪೋಟಕ ಇನಿಂಗ್ಸ್‌ನ ಮೂಲಕ ಸ್ಮೃತಿ ಮಂಧಾನಾ ಅವರು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಭಾರತ ಮಹಿಳಾ ತಂಡದ ಬ್ಯಾಟರ್ ಎಂಬ ನೂತನ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ತಮ್ಮ ಸಹ ಆಟಗಾರ್ತಿ ದೀಪ್ತಿ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ. 2017ರಲ್ಲಿ ದೀಪ್ತಿ ಶರ್ಮಾ 20 ಪಂದ್ಯಗಳಿಂದ 787 ರನ್‌ಗಳನ್ನು ಸಿಡಿಸಿದ್ದರು.
