ಉದಯವಾಹಿನಿ, ಬೆಂಗಳೂರು: ಹಳದಿ ಮಾರ್ಗದ ಮೆಟ್ರೋ ರೈಲು ಸೇವೆ ಆರಂಭವಾದ ಬಳಿಕ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಿದೆ ಎಂದು ಬೆನ್ನು ತಟ್ಟಿಕೊಂಡ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಉದ್ಯಮಿ ಮೋಹನ್‌ದಾಸ್ ಪೈ ಟಾಂಗ್ ಕೊಟ್ಟಿದ್ದಾರೆ.
ಡಿಕೆ ಶಿವಕುಮಾರ್ ಅವರೇ ನಾನು ಕೋಲ್ಕತ್ತಾದಲ್ಲಿದ್ದೇನೆ. ಪಶ್ಚಿಮ ಬಂಗಾಳದಲ್ಲಿರುವ ಟಿಟಾಘರ್ ರೈಲು ಸಿಸ್ಟಮ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಮಾತಾನಾಡಿದ್ದೇನೆ. ನಿನ್ನೆ ಐದನೇಯ ರೈಲು ಕಳುಹಿಸಿಕೊಟ್ಟಿದ್ದಾರೆ. ಆದರೆ ಮುಂದೆ ಐದು ರೈಲುಗಳಿಗೆ ಬೇಕಾದ ಬೋಗಿಗಳನ್ನು ಚೀನಾದಿಂದ ಕಳಿಸಲು ಸಾಕಷ್ಟು ಸಮಸ್ಯೆಯಾಗಿದೆ. ಹೀಗಾಗಿ ಬಿಎಂಆರ್‌ಸಿಎಲ್ ಎಂಡಿ ಜೊತೆ ಮಾತಾನಾಡಿ ಬೋಗಿಗಳು ಬೇಗ ತಲುಪುವಂತೆ ವ್ಯವಸ್ಥೆ ಮಾಡಿ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸರಕು ವಿಮಾನದ ಮೂಲಕ ಚೀನಾದಿಂದ ಬೋಗಿಗಳನ್ನು ಸಾಗಿಸಿದರೆ ಖರ್ಚು ಜಾಸ್ತಿಯಾಗುತ್ತದೆ. ಹೀಗಾಗಿ ಹಡಗು ಮಾರ್ಗದ ಮೂಲಕವೇ ಹೆಚ್ಚಾಗಿ ಸಾಗಿಸಲಾಗುತ್ತದೆ. ಇದರಿಂದಾಗಿ ಬೋಗಿಗಳು ಭಾರತ ತಲುಪಲು ತಡವಾಗುತ್ತದೆ.ಖರ್ಚು ಜಾಸ್ತಿಯಾದರೂ ವಿಮಾನದ ಮೂಲಕವೇ ಸಾಗಿಸಲು ರಾಜ್ಯ ಸರ್ಕಾರ ಬಿಎಂಆರ್‌ಸಿಎಲ್‌ಗೆ ಹೇಳಬೇಕು. ಮೆಟ್ರೋ ವಿಳಂಬವಾದಷ್ಟು ವೆಚ್ಚ ಹೆಚ್ಚಾಗುತ್ತದೆ ಎಂದು ಈ ಹಿಂದೆ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.
