ಉದಯವಾಹಿನಿ, ಇಸ್ಲಾಮಾಬಾದ್: ಭಾರತದ ‘ಆಪರೇಷನ್ ಸಿಂಧೂರ್’ನಡಿ ಪಾಕಿಸ್ತಾನದ ಮುರಿದ್ಕೆಯ ಲಷ್ಕರ್-ಎ-ತೈಬಾ ಮಾರ್ಕಜ್ ತೈಬಾ ಕೇಂದ್ರ ಧ್ವಂಸಗೊಂಡಿದ್ದನ್ನು ಕಮಾಂಡರ್ ಕಾಸಿಮ್ ಒಪ್ಪಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ, ಕಾಸಿಮ್, ಮೇ 7ರ ಭಾರತದ ದಾಳಿಯಿಂದ ನಾಶಗೊಂಡ ಕೇಂದ್ರವನ್ನು ಹಿಂದಿನಿಂತ ದೊಡ್ಡದಾಗಿ ಮರುನಿರ್ಮಿಸುತ್ತಿದ್ದೇವೆ ಎಂದು ಹೇಳಿದ್ದಾನೆ. ಈ ಘಟನೆ ಪಾಕ್ ಸೇನೆ ಮತ್ತು ಸರ್ಕಾರದ ಉಗ್ರರ ಬೆಂಬಲವನ್ನು ಬಹಿರಂಗಪಡಿಸಿದೆ.
ಪಂಜಾಬ್‌ನ ಶೇಖುಪುರ ಜಿಲ್ಲೆಯ ಮುರಿದ್ಕೆಯಲ್ಲಿ ಚಿತ್ರೀಕರಿಸಿದ ವಿಡಿಯೋದಲ್ಲಿ ಕಾಸಿಮ್, ಮಾರ್ಕಜ್ ತೈಬಾದಲ್ಲಿ ಉಗ್ರರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿತ್ತು. ಈಗ ದೇವರ ಕೃಪೆಯಿಂದ ಇದನ್ನು ಭವ್ಯವಾಗಿ ಪುನರ್‌ನಿರ್ಮಿಸುತ್ತಿದ್ದೇವೆ ಎಂದಿದ್ದಾನೆ. ಇನ್ನೊಂದು ವಿಡಿಯೋದಲ್ಲಿ LeT ಉಪಮುಖ್ಯಸ್ಥ ಸೈಫುಲ್ಲಾ ಕಸೂರಿ, “ಪಾಕ್ ಸರ್ಕಾರ ಮತ್ತು ಸೇನೆಯು ಮರುನಿರ್ಮಾಣಕ್ಕೆ ಹಣ ನೀಡಿದೆ” ಎಂದು ಹೇಳಿದ್ದಾನೆ. ಭಾರತದ ಗುಪ್ತಚರ ವರದಿಗಳು ಈ ಹೇಳಿಕೆಯನ್ನು ದೃಢಪಡಿಸಿವೆ.
ಇದೇ ವರ್ಷ ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು 26 ನಾಗರಿಕರನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ, ಭಾರತೀಯ ಸೇನೆಯು ಮೇ.7ರಂದು ‘ಆಪರೇಷನ್ ಸಿಂಧೂರ್’ನಡಿ ಪಾಕಿಸ್ತಾನ ಮತ್ತು PoKನಲ್ಲಿ 9 ಉಗ್ರ ಕೇಂದ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತು. ಮುರಿದ್ಕೆಯ LeT ಕೇಂದ್ರ, ಬಹವಲ್‌ಪುರದ JeM ಕೇಂದ್ರ ಮತ್ತು ಸಿಯಾಲ್‌ಕೋಟ್‌ನ ಹಿಜ್ಬುಲ್ ಮುಜಾಹಿದ್ದೀನ್ ಕ್ಯಾಂಪ್‌ಗಳನ್ನು ಟಾರ್ಗೆಟ್ ಮಾಡಲಾಗಿತ್ತು. ಮುರಿದ್ಕೆಯ ಕೇಂದ್ರದಲ್ಲಿ ವಸತಿಗೃಹ, ಶಸ್ತ್ರಾಸ್ತ್ರ ಗೋದಾಮು ಮತ್ತು ತರಬೇತಿ ಬ್ಲಾಕ್‌ಗಳು ನಾಶವಾದವು. ವರದಿ ಪ್ರಕಾರ LeTಯು ಕಾಶ್ಮೀರ್ ಸಾಲಿಡಾರಿಟಿ ಡೇ (ಫೆಬ್ರವರಿ 5, 2026)ಗೆ ಕೇಂದ್ರವನ್ನು ಮರುಉದ್ಘಾಟಿಸಲು ಯೋಜಿಸಿದೆ. ಪಾಕ್ ಸರ್ಕಾರವು ₹11 ಕೋಟಿ ನೀಡಿದ್ದು, ಒಟ್ಟು ವೆಚ್ಚ ₹15 ಕೋಟಿಗೆ ತಲುಪಬಹುದು ಎನ್ನಲಾಗಿದೆ. ಡೌರಾ-ಎ-ಸುಫಾ ತರಬೇತಿ ಕಾರ್ಯಕ್ರಮವನ್ನು ಮರುಆರಂಭಿಸಲು ಯೋಜನೆ ರೂಪಿಸಲಾಗಿದೆ. ಈ ವಿಡಿಯೋಗಳು ಭಾರತದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಪಾಕ್‌ನ ಉಗ್ರ ಬೆಂಬಲವನ್ನು ಖಂಡಿಸಲಾಗಿದೆ. ಭಾರತ-ಪಾಕ್ ಒತ್ತಡವನ್ನು ಈ ಘಟನೆ ಮತ್ತಷ್ಟು ತೀವ್ರಗೊಳಿಸಿದೆ, ಉಗ್ರರ ವಿರುದ್ಧದ ಕಾರ್ಯಾಚರಣೆಯ ಮಹತ್ವವನ್ನು ಒತ್ತಿಹೇಳಿದೆ.
