ಉದಯವಾಹಿನಿ, ಲಖನೌ: ವೃದ್ಧರೊಬ್ಬರ ಮೇಲೆ ಹಸುವೊಂದು ದಾಳಿ ಮಾಡಿದ ಪರಿಣಾಮ ಆ ವ್ಯಕ್ತಿ ಗಂಭೀರ ಗಾಯಗೊಂಡ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಲ್ಯಾಣಪುರದಲ್ಲಿ ನಡೆದಿದೆ. ರಸ್ತೆಯ ಮಧ್ಯದಲ್ಲೇ ಹಸು ದಾಳಿ ಮಾಡಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಮನಕಲಕುವ ದೃಶ್ಯದಲ್ಲಿ ಹಸುವು ಆ ವ್ಯಕ್ತಿಯನ್ನು ಬೆನ್ನಟ್ಟಿ ಪದೇ ಪದೇ ಕೆಡವಿ, ಆತನನ್ನು ತೀವ್ರವಾಗಿ ಗಾಯಗೊಳಿಸುವುದನ್ನು ಸೆರೆಹಿಡಿಯಲಾಗಿದೆ.
ಸ್ಥಳೀಯ ವರದಿಗಳ ಪ್ರಕಾರ, ವೃದ್ಧ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಹಸು ದಾಳಿಯ ಈ ಘಟನೆಯು ದಾರಿಹೋಕರಲ್ಲಿ ಭೀತಿಯನ್ನುಂಟುಮಾಡಿದೆ. ವೃದ್ಧನ ಮೇಲೆ ಹಸು ಆಕ್ರಮಣ ತೋರುತ್ತಿರುವಾಗ ಕೆಲವು ದಾರಿಹೋಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಆದರೆ ಹಸುವಿನ ಆಕ್ರಮಣದಿಂದಾಗಿ ಹಿಂದೆ ಸರಿಯಬೇಕಾಯಿತು.
ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ಭಾರಿ ಆಕ್ರೋಶಕ್ಕೆ ಕಾರಣವಾಯ್ತು. ಭವಿಷ್ಯದಲ್ಲಿ ಇಂತಹ ದಾಳಿಗಳನ್ನು ತಡೆಗಟ್ಟಲು ಉತ್ತಮ ಪ್ರಾಣಿ ನಿಯಂತ್ರಣ ಕ್ರಮಗಳು ಮತ್ತು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಅನೇಕರು ಕರೆ ನೀಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದ್ದು, ಅನೇಕ ಬಳಕೆದಾರರು ದಾಳಿಯ ತೀವ್ರತೆಯ ಬಗ್ಗೆ ಅಪನಂಬಿಕೆ ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
