ಉದಯವಾಹಿನಿ, ಚಿತ್ರದುರ್ಗ: ಗರ್ಭಿಣಿ ಮತ್ತು ಬಾಣಂತಿಯರ ಆರೈಕೆಗಾಗಿ ಆಯುರ್ವೇದವು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಆಯುರ್ವೇದದ ಪ್ರಕಾರ, ಆರೋಗ್ಯಕರ ಗರ್ಭಧಾರಣೆ ಎಂದರೆ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಅಂಶಗಳ ಸಮತೋಲನ ಕೂಡ ಆಗಿದೆ.ಎಂದು ಆಯುಷ್ ಅರೋಗ್ಯ ಮತ್ತು ಕ್ಷೇಮ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ವಿಜಯಲಕ್ಷ್ಮಿ ತಿಳಿಸಿದ್ದಾರೆ.
ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆ ಅಡಿಯಲ್ಲಿ ಜಿಲ್ಲಾಡಳಿತ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ವತಿಯಿಂದ ಇತ್ತೀಚಿಗೆ ನಗರದ ಒನಕೆ ಓಬವ್ವ ಸ್ಟಡಿಯಂ ಹತ್ತಿರದ ಬಾಲ ಭವನದಲ್ಲಿ ಹಮ್ಮಿಕೊಂಡಿದ್ದ ಎಂಟನೇ ವರ್ಷದ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಆಯುರ್ವೇದ ಗರ್ಭಿಣಿಯರಿಗೆ ಮತ್ತು ಮಗುವಿಗೆ ಉತ್ತಮ ಆರೋಗ್ಯ ಮತ್ತು ಬೆಳವಣಿಗೆಗಾಗಿ ಆಯುಷ್ ಪದ್ಧತಿಯಲ್ಲಿ ನೀಡುವ ಒಂದು ವಿಶೇಷ ಆರೈಕೆಯ ಕ್ರಮವಾಗಿದೆ ಇದರಲ್ಲಿ ಪೌಷ್ಟಿಕ ಆಹಾರ, ಯೋಗ ಮತ್ತು ಪ್ರಾಣಾಯಾಮ, ಮನಸ್ಸಿಗೆ ಶಾಂತಿ ನೀಡುವ ಆರಾಮದಾಯಕ ಜೀವನಶೈಲಿಯಾಗಿದೆ.
ಆರೋಗ್ಯಕರ ಗರ್ಭಧಾರಣೆಗೆ ಸರಿಯಾದ ಆಹಾರ ಪದ್ಧತಿ ಮುಖ್ಯ. ಆಯುರ್ವೇದವು ಪ್ರತಿ ತಿಂಗಳಿಗನುಗುಣವಾಗಿ ಯಾವ ಆಹಾರ ಸೇವಿಸಬೇಕು ಎಂಬುದನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಹಾಲು, ತುಪ್ಪ, ಬೆಣ್ಣೆ, ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಲು ಸಲಹೆ ನೀಡಲಾಗುತ್ತದೆ.
ನುರಿತ ವೈದ್ಯರ ಸಲಹೆಯ ಮೇರೆಗೆ ನಿಯಮಿತವಾಗಿ ಮಸಾಜ್ ಮಾಡಿಸಿಕೊಳ್ಳುವುದರಿಂದ ಗರ್ಭಿಣಿಯ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ.
ಆಯುರ್ವೇದದ ಅಡುಗೆಗಳು ಬಾಣಂತಿಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಗರ್ಭಿಣಿಯರು ಹೆರಿಗೆ ನಂತರ ಕಳೆದುಕೊಂಡ ಶಕ್ತಿಯನ್ನು ಮರಳಿ ಪಡೆಯಲು ಮತ್ತು ಗರ್ಭಕೋಶವನ್ನು ಶುದ್ಧೀಕರಿಸಲು ಔಷಧಿಗಳನ್ನು ನೀಡಲಾಗುತ್ತದೆ. ಅದಕ್ಕೆ ಯಾವುದೇ ಅಡ್ಡ ಪರಿಣಾಮಗಳು ಇಲ್ಲದ ಆಯುಷ್ ಪದ್ದತಿಯನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯಕರ ಜೀವನ ಸಾಗಿಸಬಹುದಾಗಿದೆ ಎಂದು ತಿಳಿಸಿದರು. ಮೊದಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ರಶ್ಮಿ ಎಸ್ ಮರಡಿ ಗರ್ಭಿಣಿ, ಬಾಣಂತಿಯರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸೂಚನೆ ಮೇರೆಗೆ ಉತ್ತಮ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಮಹೇಶ್ವರಪ್ಪ,ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಅಭಿನವ್,ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಪ್ರಕಾಶ್, ಜಿಲ್ಲಾ ನಿರೂಪಣಾಧಿಕಾರಿ ಡಿ.ಮಂಜುನಾಥ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರೇಮ್ ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮಂಜುಳಾ, ಅನುರಾಧ, ಅಂಗನವಾಡಿ ಕಾರ್ಯಕರ್ತರು ಇದ್ದರು.
