ಉದಯವಾಹಿನಿ, ಬೆಂಗಳೂರು: ರಾಜ್ಯದ 7 ಕೋಟಿ ಜನರಿಗೂ ತೃಪ್ತಿಯಾಗುವಂತೆ ಜಾತಿಗಣತಿ ಸಮೀಕ್ಷೆ ನಡೆಯಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ 22ರಿಂದ ಆರಂಭವಾಗಲಿರುವ ಸಮೀಕ್ಷೆ ಪೂರ್ಣಗೊಂಡ ಬಳಿಕ, ಹಿಂದುಳಿದಿರುವಿಕೆಯ ಗುರುತಿಸುವಿಕೆ, ಅಂಕ ನೀಡುವಿಕೆಯಲ್ಲಿ ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ಎಲ್ಲರ ಅಭಿಪ್ರಾಯ ಪಡೆದೇ ಸರ್ಕಾರ ಮುಂದಡಿ ಇಡಲಿದೆ. ಇದನ್ನು ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಎಲ್ಲ 7 ಕೋಟಿ ಜನರಿಗೂ ತೃಪ್ತಿಯಾಗುವ ರೀತಿಯಲ್ಲಿ ಸಮೀಕ್ಷೆ ನಡೆಯಲಿದೆ.  ಜಾತಿ, ಜನಾಂಗದಲ್ಲೂ ಬಡವರಿದ್ದಾರೆ, ನಿರ್ಗತಿಕರಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಸರ್ಕಾರದ ಯೋಜನೆಯ ಲಾಭ ದೊರಕಬೇಕೆಂಬ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದೆ ಎಂದರು.
ಹಿಂದುಳಿದಿರುವಿಕೆಯನ್ನು ತಿಳಿಯಲು ಮತ್ತು ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವ ಉದ್ದೇಶದಿಂದಲೇ ಈ ಸಮೀಕ್ಷೆ ನಡೆಯುತ್ತಿದೆ.  ಸಮಾಜದ ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾಗಬೇಕು ಮತ್ತು ವಾಸ್ತವ ಮಾಹಿತಿಯನ್ನು ದಾಖಲೀಕರಿಸಬೇಕು. ಲಿಂಗಾಯತ-ವೀರಶೈವ ಎಂದು ಧರ್ಮದ ಕಾಲಂನಲ್ಲಿ ಬರೆಸಬೇಕು ಎಂಬುದು ಮಹಾಸಭಾ ನಿಲುವಾಗಿದೆ. ಆದರೆ ಪ್ರತ್ಯೇಕ ಧರ್ಮ ಎಂದು ಇನ್ನೂ ಗುರುತಿಸಿಲ್ಲ. ಹೀಗಾಗಿ ಆತ್ಮಸಾಕ್ಷಿಯಂತೆ ಮತ್ತು ವಿವೇಚನೆಗೆ ತಕ್ಕಂತೆ ಬರೆಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ. ಒಂದೇ ಎಂಬುದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿಲುವಾಗಿದ್ದು, ಪ್ರತ್ಯೇಕ ಧರ್ಮಕ್ಕಾಗಿ ಪ್ರಯತ್ನ ಮುಂದುವರಿಯಲಿದೆ. ಸಿದ್ದಗಾಂಗಾ ಮಹಾಸಂಸ್ಥಾನದ ಲಿಂಗೈಕ್ಯ ಡಾ.ಶಿವಕುಮಾರ್ ಸ್ವಾಮೀಜಿ ಅವರೂ ವೀರಶೈವ-ಲಿಂಗಾಯತ ಒಂದೇ ಎಂದು ಪ್ರತಿಪಾದಿಸಿದ್ದರು. ಹುಬ್ಬಳ್ಳಿಯಲ್ಲಿ ಮಠಾಧಿಪತಿಗಳ ಒಕ್ಕೂಟ ಆಯೋಜಿಸಿದ್ದ ಏಕತಾ ಸಮಾವೇಶ ಸಂಪೂರ್ಣ ಯಶಸ್ವಿಯಾಗಿದೆ. ಪೂಜ್ಯ ದಿಂಗಾಲೇಶ್ವರ ಮಹಾಸ್ವಾಮೀಜಿ, ಶ್ರೀ ಸಿದ್ದಲಿಂಗ ಸ್ವಾಮೀಜಿ, ಪಂಚಪೀಠದ ಪೀಠಾಧಿಪತಿಗಳು, ಸಾವಿರಾರು ಹರಚರಗುರು ಮೂರ್ತಿಗಳು ಹಾಗೂ ಸಾವಿರಾರು ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಈ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!