ಉದಯವಾಹಿನಿ, ಮಂಡ್ಯ: ಕೆಆರ್‌ಎಸ್‌ನಲ್ಲಿನ ಕಾವೇರಿ ಆರತಿ ವಿಚಾರ ನ್ಯಾಯಾಲಯದಲ್ಲಿ ಇದ್ದರೂ ಸಹ ಕೆಆರ್‌ಎಸ್‌ನ ಬೃಂದಾವನದಲ್ಲಿ ಕಾವೇರಿ ಆರತಿ ಸದ್ದಿಲ್ಲದೆ ಆರಂಭಗೊಳ್ಳುತ್ತಿದೆ. ನಿನ್ನೆ ರಾತ್ರಿ ಬೃಂದಾವನದ ಬಳಿ ಪ್ರಾಯೋಗಿಕವಾಗಿ ಕಾವೇರಿ ಆರತಿ ನಡೆದಿದೆ.
ಮೈಸೂರು ಮಹರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಹಾಗೂ ಮಿರ್ಜಾ ಇಸ್ಮಾಯಿಲ್ ಅವರ ಯೋಜನೆಯಿಂದ ಪ್ರವಾಸಿಗರನ್ನು ಆಕರ್ಷಿಸಲು ಕೃಷ್ಣರಾಜಸಾಗರ ಅಣೆಕಟ್ಟು ಕೆಳಭಾಗದಲ್ಲಿ ನಿರ್ಮಿಸಿದ ವಿಶ್ವವಿಖ್ಯಾತ ಬೃಂದಾವನ ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿತ್ತು. ಇದೀಗ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಬೃಂದಾವನದೊಳಗೆ ಪಿಒಪಿಯಲ್ಲಿ ಕಾವೇರಿ ಪ್ರತಿಮೆ ನಿರ್ಮಿಸಿ ಸದ್ದಿಲ್ಲದೆ ಕಾವೇರಿ ಆರತಿಗೆ ಸಿದ್ಧತೆ ನಡೆಸಲಾಗುತ್ತಿದೆ.
ಕಾವೇರಿ ಆರತಿಯನ್ನು ವಿರೋಧಿಸಿ ರೈತ ಸಂಘಟನೆಗಳು ನ್ಯಾಯಾಲಯಕ್ಕೆ ದಾವೆ ಹೂಡಿವೆ. ಈ ವಿಚಾರ ಕೋರ್ಟ್‌ನಲ್ಲಿ ಇದ್ದರೂ ಸಹ ಡಿಸಿಎಂ ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಇದರ ಒಂದು ಭಾಗವಾಗಿ ಕಳೆದ ರಾತ್ರಿ ಪ್ರಯೋಗಿಕವಾಗಿ ಕಾವೇರಿ ಆರತಿ ನಡೆದಿದೆ. ಕಾವೇರಿ ನೀರಾವರಿ ನಿಗಮ ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. 13 ಅರ್ಚಕರ ತಂಡದಿಂದ 30 ನಿಮಿಷಗಳ ಕಾಲ ಕಾವೇರಿ ಆರತಿ ಜರುಗಿದೆ.

Leave a Reply

Your email address will not be published. Required fields are marked *

error: Content is protected !!