ಉದಯವಾಹಿನಿ, ಬೆಂಗಳೂರು: ಹಿಂದೂಗಳೆಂದರೆ ತಮಗೆ ಯಾಕಿಷ್ಟು ದ್ವೇಷ, ತಾತ್ಸಾರ ಸಿದ್ದರಾಮಯ್ಯನವರೇ? ರಾಹುಲ್ ಗಾಂಧಿ ಅವರ ಸಂವಿಧಾನ ಪುಸ್ತಕದಲ್ಲಿ ಹಿಂದೂಗಳು ಎರಡನೇ ದರ್ಜೆ ಪ್ರಜೆಗಳಾ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಹಿಂದೂಗಳ ದೇವಸ್ಥಾನ, ಹಬ್ಬ, ಆಚರಣೆಗಳಿಗೆ ಅಡಚಣೆ ಉಂಟು ಮಾಡುವುದರಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಅದೆಂತಹ ವಿಕೃತ ಸಂತೋಷ ಸಿಗುತ್ತೋ ಗೊತ್ತಿಲ್ಲ. ತಾಯಿ ಚಾಮುಂಡೇಶ್ವರಿ, ತಾಯಿ ಭುವನೇಶ್ವರಿ, ನಮ್ಮ ಸಂಸ್ಕೃತಿಯ ಪ್ರತೀಕವಾದ ಅರಶಿಣ, ಕುಂಕುಮದ ಮೇಲೆ ನಂಬಿಕೆ ಇಲ್ಲದ ಅನ್ಯಧರ್ಮೀಯರಿಂದ ದಸರಾ ಉದ್ಘಾಟನೆ ಮಾಡಿಸುವ ಹಠ ಸಾಧಿಸಿದ್ದಾಯಿತು. ದುಬಾರಿ ಪಾಸ್ ನೆಪದಲ್ಲಿ ಜನಸಾಮಾನ್ಯರಿಗೆ ದಸರಾ ವೀಕ್ಷಣೆ ಕಷ್ಟಸಾಧ್ಯ ಮಾಡಿದ್ದಾಯ್ತು. ಈಗ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ 14 ಪ್ರಮುಖ ಮುಜರಾಯಿ ದೇವಸ್ಥಾನಗಳಲ್ಲಿ ಸೇವಾ ಶುಲ್ಕ ಏರಿಕೆ ಮಾಡುವ ಮೂಲಕ ಹಿಂದೂಗಳಿಗೆ ಮತ್ತೊಂದು ಪೆಟ್ಟು ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಎರಡೂವರೆ ವರ್ಷಗಳಿಂದ ಡೆಡ್‌ಲೈನ್ ಮೇಲೆ ಡೆಡ್‌ಲೈನ್ ಕೊಟ್ಟರೂ ಅಧಿಕಾರಿಗಳ ಕೈಯಲ್ಲಿ ರಸ್ತೆಗುಂಡಿ ಮುಚ್ಚಿಸಲು ವಿಫಲವಾಗಿರುವ ತಾವು ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ಯಾವಾಗ ಡಿಸಿಎಂ ಡಿಕೆಶಿವಕುಮಾರ್ ಅವರೇ..? ಎಂದು ಬೆಂಗಳೂರು ಗುಂಡಿ ಸಮಸ್ಯೆ ವಿಚಾರವಾಗಿ ಡಿಸಿಎಂ ಡಿಕೆಶಿ ವಿರುದ್ಧ ಹರಿಹಾಯ್ದರು.
