ಉದಯವಾಹಿನಿ, ಅಮೆರಿಕ: ತನ್ನ ರೂಮ್ಮೇಟ್ಗೆ ಇರಿದ ಆರೋಪದಡಿ ತೆಲಂಗಾಣ ಮೂಲದ ಟೆಕ್ಕಿಯನ್ನು ಅಮೆರಿಕದ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ತೆಲಂಗಾಣದ ಮೆಹಬೂಬನಗರದ ಮೊಹಮ್ಮದ್ ನಿಜಾಮುದ್ದೀನ್ (30) ಗುಂಡೇಟಿಗೆ ಬಲಿಯಾದ ಟೆಕ್ಕಿ.ಮೊಹಮ್ಮದ್ ನಿಜಾಮುದ್ದೀನ್ ಮತ್ತು ಆತನ ರೂಮ್‌ಮೇಟ್ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ನಿಜಾಮುದ್ದೀನ್ ಚಾಕುವಿನಿಂದ ಇರಿದಿದ್ದ. ಗಾಯಗೊಂಡ ವ್ಯಕ್ತಿ ತಕ್ಷಣ ತುರ್ತು ಸಂಖ್ಯೆ 911ಕ್ಕೆ ಕರೆ ಮಾಡಿದ್ದ. ಪೊಲೀಸರು ಘಟನಾ ಸ್ಥಳಕ್ಕಾಗಮಿಸಿದಾಗ ಗಾಯಾಳು ನೆಲದ ಮೇಲೆ ಬಿದ್ದಿದ್ದ. ಮೊಹಮ್ಮದ್ ನಿಜಾಮುದ್ದೀನ್ ಕೈಯಲ್ಲಿ ಚಾಕು ಇರುವುದನ್ನು ನೋಡಿದ ಪೊಲೀಸರು ಆತನ ಮೇಲೆ ನಾಲ್ಕು ಬಾರಿ ಗುಂಡು ಹಾರಿಸಿದ್ದಾರೆ ಎಂದು ಸಾಂತಾ ಕ್ಲಾರಾ ಪೊಲೀಸ್ ಅಧೀಕ್ಷಕ ಮಾರ್ಗನ್ ತಿಳಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಮೊಹಮ್ಮದ್ ನಿಜಾಮುದ್ದೀನ್ನನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತು. ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು. ಇರಿತಕ್ಕೊಳಗಾದ ವ್ಯಕ್ತಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಮ್ಮ ಮಗ ಮೊಹಮ್ಮದ್ ನಿಜಾಮುದ್ದೀನ್ ಅಮೆರಿಕದಲ್ಲಿ ಎಂಎಸ್ ಮುಗಿಸಿದ ನಂತರ ಅಲ್ಲೇ ಸಾಫ್ಟ್‌ವೇರ್ ವೃತ್ತಿಪರನಾಗಿ ಕೆಲಸ ಮಾಡುತ್ತಿದ್ದ. ಈ ಘಟನೆ ಸೆಪ್ಟೆಂಬರ್ 3ರಂದು ನಡೆದಿದೆ ಎಂದು ಮೃತನ ತಂದೆ ಮೊಹಮ್ಮದ್ ಹಸ್ನುದ್ದೀನ್ ಹೇಳಿದ್ದಾರೆ. ಮೃತದೇಹವನ್ನು ಮಹಬೂಬ್‌ನಗರಕ್ಕೆ ತರಲು ಸಹಾಯ ಮಾಡುವಂತೆ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಮತ್ತು ಕೇಂದ್ರ ಸರ್ಕಾರಕ್ಕೆ ಮೊಹಮ್ಮದ್ ಹಸ್ನುದ್ದೀನ್ ಮನವಿ ಮಾಡಿದ್ದಾರೆ. ಮಜ್ಲಿಸ್ ಬಚಾವೊ ತಹ್ರೀಕ್ (MBT) ವಕ್ತಾರ ಅಮ್ಜೆದ್ ಉಲ್ಲಾ ಖಾನ್, ಭಾರತಕ್ಕೆ ಮೃತದೇಹ ತರಲು ಆತನ ಕುಟುಂಬಕ್ಕೆ ಸಹಾಯ ಮಾಡುವಂತೆ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ.
