ಉದಯವಾಹಿನಿ, ನವದೆಹಲಿ: ಪ್ರವಾಸಿ ಆಸ್ಟ್ರೇಲಿಯಾ ಮತ್ತು ಆತಿಥೇಯ ಭಾರತ ಮಹಿಳಾ ತಂಡಗಳ ನಡುವಣ ಮೂರನೇ ಹಾಗೂ ಅಂತಿನ ಏಕದಿನ ಪಂದ್ಯ ಇಂದು ಅರುಣ್‌ ಜೇಟ್ಲಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯಲಿದೆ. ಹಿಂದಿನ ಪಂದ್ಯದಲ್ಲಿ ದಾಖಲೆಯ ಜಯ ಸಾಧಿಸಿದ ಹರ್ಮನ್‌ಪ್ರೀತ್‌ ಬಳಗ ಅಂತಿಮ ಪಂದ್ಯ ಗೆದ್ದು, ಚಾರಿತ್ರಿಕ ಸಾಧನೆಗೈಯ್ಯುವತ್ತ ಕಣ್ಣಿಟ್ಟಿದೆ. ಈ ಪಂದ್ಯದಲ್ಲಿ ಭಾರತ ತಂಡ ಪಿಂಕ್‌ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಸ್ತನ ಕ್ಯಾನ್ಸರ್ ಜಾಗೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ವೀಡಿಯೊ ಮೂಲಕ ಈ ಉಪಕ್ರಮವನ್ನು ದೃಢಪಡಿಸಿದೆ. ವಿಡಿಯೊದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್, ಪ್ರತಿಕಾ ರಾವಲ್ ಮತ್ತು ಸ್ನೇಹ್ ರಾಣಾ ಗುಲಾಬಿ ಬಣ್ಣದ ಜೆರ್ಸಿ ತೊಟ್ಟು ಸ್ತನ ಕ್ಯಾನ್ಸರ್ ಜಾಗೃತಿಯ ಸಂದೇಶವನ್ನು ನೀಡಿದ್ದಾರೆ.
“ಸ್ತನ ಕ್ಯಾನ್ಸರ್ ಜಾಗೃತಿಯನ್ನು ಉತ್ತೇಜಿಸಲು ಟೀಮ್ ಇಂಡಿಯಾ ಇಂದು ಮೂರನೇ ಏಕದಿನ ಪಂದ್ಯದಲ್ಲಿ ವಿಶೇಷ ಗುಲಾಬಿ ಬಣ್ಣದ ಜೆರ್ಸಿಗಳನ್ನು ಧರಿಸಲಿದೆ” ಎಂದು ಬಿಸಿಸಿಐ ಪೋಸ್ಟ್‌ ಮಾಡಿದೆ. ಸರಣಿ ಸದ್ಯ 1–1 ಆಗಿದೆ. ಆದರೆ ಈ ಗುರಿ ಅಂದುಕೊಂಡಷ್ಟು ಸುಲಭವಲ್ಲ. ಮೊದಲ ಪಂದ್ಯದಲ್ಲಿ ದುರ್ಬಲ ಫೀಲ್ಡಿಂಗ್‌ನಿಂದ ಸೋತ ಭಾರತ ತಂಡ ಎರಡನೇ ಪಂದ್ಯದಲ್ಲಿ 102 ರನ್‌ಗಳ ಭಾರಿ ಜಯಗಳಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ ಭಾರತದ ವನಿತೆಯರು ಈ ಹಿಂದೆ ಎಂದೂ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದಿಲ್ಲ. ಆದರೆ ಈ ಬಾರಿ ಐತಿಹಾಸಿಕ ಸರಣಿ ಗೆಲುವಿನ ಅವಕಾಶ ಭಾರತದ ಮುಂದಿದೆ.

ಸ್ಮೃತಿ ಮಂದಾನ ಮತ್ತು ಪ್ರತಿಕಾ ಎರಡೂ ಪಂದ್ಯಗಳಲ್ಲಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಹರ್ಮನ್‌ಪ್ರೀತ್, ಹರ್ಲಿನ್‌ ಡಿಯೊಲ್‌, ರಿಚಾ ಘೋಷ್‌ ಅವರಿಂದ ಉಪಯುಕ್ತ ಆಟ ಬರಬೇಕಿದೆ. ಇವರೆಲ್ಲ ಫಾರ್ಮ್‌ ಕಂಡುಕೊಂಡರೆ ಭಾರತಕ್ಕೆ ಗೆಲುವು ಖಚಿತ ಎನ್ನಲಡ್ಡಿಯಿಲ್ಲ.

Leave a Reply

Your email address will not be published. Required fields are marked *

error: Content is protected !!