ಉದಯವಾಹಿನಿ, ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಾಳೆ ವಿಧ್ಯುಕ್ತಚಾಲನೆ ಸಿಗಲಿದ್ದು, ಇಂದು ಚಾಮುಂಡಿ ಬೆಟ್ಟದಲ್ಲಿ ಭರದ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ ನಾಡಹಬ್ಬಕ್ಕೆ ಅದ್ಧೂರಿ ಚಾಲನೆ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ.
ದಸರಾ ಸ್ವಾಗತಿಸಲು ಸಾಂಸ್ಕೃತಿಕ ನಗರಿ ಮೈಸೂರು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಾಳೆ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವ ಉದ್ಘಾಟನೆ ಆಗಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಲೇಖಕಿ ಬಾನು ಮುಷ್ತಾಕ್ ಈ ಬಾರಿ ದಸರಾ ಉದ್ಘಾಟನೆ ನೆರವೇರಿಸಲಿದ್ದು, ಇದಕ್ಕೆ ಪರ-ವಿರೋಧ ಚರ್ಚೆ ಜೋರಾಗಿದೆ. ಇದರ ನಡುವೆ ಸರ್ಕಾರ ಬಾನು ಮುಷ್ತಾಕ್‌ರಿಂದ ದಸರಾ ಮಹೋತ್ಸವಕ್ಕೆ ಚಾಲನೆ ಕೊಡಿಸಲು ಬಿಗಿ ಬಂದೋಬಸ್ತ್ ಜೊತೆಗೆ ಬೃಹತ್ ವೇದಿಕೆ ತಯಾರಿ ಮಾಡಿದೆ. ಈಗಾಗಲೇ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಶುಚಿಗೊಳಿಸಿರುವ ಅರ್ಚಕರು, ತಾಯಿಗೆ ಹಸಿರು ಸೀರೆಯುಡಿಸಿ ತಯಾರಿ ಮಾಡಿಕೊಂಡಿದ್ದಾರೆ. ನಾಳೆ ಮುಂಜಾನೆಯಿಂದಲೇ ವಿವಿಧ ಅಭಿಷೇಕ, ಪೂಜಾಕೈಂಕರ್ಯಗಳು ನೆರವೇರಲಿದ್ದು, ಬಳಿಕ ಬೆಳ್ಳಿರಥಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನ ವೇದಿಕೆಗೆ ತಂದು ಪುಷ್ಪಾರ್ಚನೆ ಮಾಡಲಿದ್ದಾರೆ. ಬೆಳಗ್ಗೆ 10:10 ರಿಂದ 10:40ರ ವೃಶ್ಚಿಕ ಶುಭ ಲಗ್ನದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಲೇಖಕಿ ಬಾನು ಮುಷ್ತಾಕ್ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟನೆ ಮಾಡಲಿದ್ದಾರೆ.
