ಉದಯವಾಹಿನಿ, ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಈಗಾಗಲೇ ಎರಡು ಕೋಟಿ ಮನೆಗಳ ಪಟ್ಟಿ ತಯಾರಿಸುವ, ಜಿಯೋ-ಟ್ಯಾಗಿಂಗ್ ಹಾಗೂ ಗಣತಿ ಬ್ಲಾಕ್‌ನ ನಕ್ಷೆ ಮಾಡುವ ಕಾರ್ಯವನ್ನು ಮಾಡಿ ಮುಗಿಸಿದ್ದೇವೆ. ಬ್ಲಾಕ್ ನಕ್ಷೆಗಳಲ್ಲಿ ಮನೆಗಳನ್ನು ಗುರುತಿಸುವುದಲ್ಲದೇ ರಸ್ತೆಗಳನ್ನೂ ನಮೂದಿಸಿದ್ದು, ಗಣತಿದಾರರು ಸಮೀಕ್ಷೆ ಮಾಡಬೇಕಾದ ಮನೆಯನ್ನು ತಲುಪಲು ಅನುಕೂಲವಾಗುವಂತೆ ಮಾಡಿದ್ದೇವೆ. ಹಾಗಾಗಿ ಸೆಪ್ಟೆಂಬರ್ 22ರಿಂದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ ಎಂದು ಆಯೋಗದ ಅಧ್ಯಕ್ಷರಾದ ಮಧುಸೂದನ್ ಆರ್. ನಾಯ್ಕ್ ಅವರು ತಿಳಿಸಿದರು.
ವಸಂತನಗರದ ದೇವರಾಜು ಅರಸು ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಸಮಸ್ತ ನಾಗರಿಕರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆಪ್ಟೆಂಬರ್ 22ರಿಂದ ಪ್ರಾರಂಭಿಸುತ್ತಿದೆ. ಒಬ್ಬ ಸಮೀಕ್ಷಕರಿಗೆ ಸುಮಾರು 140 ರಿಂದ 150 ಮನೆಗಳನ್ನು ಹೊಂದಿರುವ ಬ್ಲಾಕ್‌ಗಳನ್ನ ಹಂಚಿಕೆ ಮಾಡಲಾಗಿದೆ. ಸುಮಾರು 2 ಲಕ್ಷ ಶಿಕ್ಷಕರು ಹಾಗೂ ಇತರ ಸಿಬ್ಬಂದಿ ಸಮೀಕ್ಷೆ ಹಾಗೂ ಸಂಬಂಧಿತ ಕೆಲಸಗಳಲ್ಲಿ ನಿರತರಾಗಲಿದ್ದು, ಇಲಾಖಾ ಅಧಿಕಾರಿಗಳು ಮೇಲುಸ್ತುವಾರಿ ಮಾಡಲಿದ್ದಾರೆ. ಒಬ್ಬ ಸಮೀಕ್ಷಕರು ಒಂದು ದಿನಕ್ಕೆ ಅಂದಾಜು 7 ರಿಂದ 8 ಮನೆಗಳನ್ನು ಸಮೀಕ್ಷೆ ಮಾಡಿದಲ್ಲಿ ರಾಜ್ಯಾದ್ಯಂತ ಇರುವ ಸುಮಾರು 2 ಕೋಟಿ ಕುಟುಂಬಗಳ ಮಾಹಿತಿಯನ್ನು 16 ದಿನಗಳಲ್ಲಿ ಮೊಬೈಲ್ ಆಪ್‌ನಲ್ಲಿ ಸಂಗ್ರಹಿಸಬಹುದಾಗಿದೆ. ಸಮೀಕ್ಷೆಯಲ್ಲಿ ಕುಟುಂಬಗಳ ದತ್ತಾಂಶಗಳನ್ನು ವಿಶೇಷ ತಂತ್ರಾಂಶ ಹೊಂದಿರುವ ಮೊಬೈಲ್ ಆ್ಯಪ್ ಮೂಲಕ ಸಂಗ್ರಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
