ಉದಯವಾಹಿನಿ, ಲಖನೌ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಣಾಸಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಸೋಮವಾರ ಪ್ರಯಾಣಿಕನೊಬ್ಬ ಕಾಕ್‌ಪಿಟ್ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ ಎಂಬ ಆಘಾತಕಾರಿ ಅಂಶ ತಿಳಿದು ಬಂದಿದೆ. ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕನು ಕಾಕ್‌ಪಿಟ್ ಪ್ರದೇಶವನ್ನು ಪ್ರವೇಶಿಸಿದ್ದಲ್ಲದೆ, ಸರಿಯಾದ ಪಾಸ್‌ಕೋಡ್ ಅನ್ನು ಸಹ ನಮೂದಿಸಿದ್ದಾನೆ ಎಂದು ವರದಿಯಾಗಿದೆ. ಆದರೆ, ಸಂಭಾವ್ಯ ವಿಮಾನ ಹೈಜಾಕ್‌ ಭಯದಿಂದ ಕ್ಯಾಪ್ಟನ್ ಬಾಗಿಲು ತೆರೆಯಲು ನಿರಾಕರಿಸಿದ್ದ.ಪ್ರಯಾಣಿಕನು ಇತರ ಎಂಟು ಸಹಚರರೊಂದಿಗೆ ಪ್ರಯಾಣಿಸುತ್ತಿದ್ದನೆಂದು ವರದಿಯಾಗಿದೆ. ವಾರಣಾಸಿಯಲ್ಲಿ ವಿಮಾನ ಇಳಿದಾಗ ಎಲ್ಲಾ ಒಂಬತ್ತು ಪ್ರಯಾಣಿಕರನ್ನು ಹೆಚ್ಚಿನ ತನಿಖೆಗಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಹಸ್ತಾಂತರಿಸಲಾಯಿತು. ಕೆಲ ಸಮಯ ಸಹ ಪ್ರಯಾಣಿಕರಲ್ಲಿ ಆತಂಕ ಮೂಡಿತ್ತು. ಸದ್ಯ ವಿಮಾನ ಸೇಫ್‌ ಆಗಿ ಲ್ಯಾಂಡ್‌ ಆಗಿದೆ.
ಏರ್‌ ಇಂಡಿಯಾ ಈ ಕುರಿತು ಮಾಹಿತಿ ನೀಡಿದ್ದು, ವಾರಣಾಸಿಗೆ ಹೋಗುವ ನಮ್ಮ ವಿಮಾನವೊಂದರಲ್ಲಿ ಪ್ರಯಾಣಿಕರೊಬ್ಬರು ಶೌಚಾಲಯವನ್ನು ಹುಡುಕುತ್ತಿರುವಾಗ ಕಾಕ್‌ಪಿಟ್ ಪ್ರವೇಶ ಪ್ರದೇಶವನ್ನು ಸಮೀಪಿಸಿದ ಘಟನೆಯ ಕುರಿತು ಮಾಧ್ಯಮ ವರದಿಗಳ ಬಗ್ಗೆ ನಮಗೆ ತಿಳಿದಿದೆ. ಬಲವಾದ ಸುರಕ್ಷತೆ ಮತ್ತು ಭದ್ರತಾ ಪ್ರೋಟೋಕಾಲ್‌ಗಳು ಜಾರಿಯಲ್ಲಿವೆ. ಹಾಗಾಗಿ ಇದರಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ನಾವು ಪುನರುಚ್ಚರಿಸುತ್ತೇವೆ. ಈ ವಿಷಯವನ್ನು ಲ್ಯಾಂಡಿಂಗ್ ಸಮಯದಲ್ಲಿ ಸಂಬಂಧಿತ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ ಮತ್ತು ಪ್ರಸ್ತುತ ಈ ಘಟನೆ ತನಿಖೆಯಲ್ಲಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!