ಉದಯವಾಹಿನಿ, ಭೋಪಾಲ್: ಜೀವಾವಧಿ ಶಿಕ್ಷೆಯನ್ನು ವಜಾಗೊಳಿಸುವಂತೆ ಕೊಲೆ ಅಪರಾಧಿಯೊಬ್ಬ ಮಧ್ಯಪ್ರದೇಶ ಹೈಕೋರ್ಟ್ ಗೆ ಮನವಿ ಮಾಡಿದ್ದು, ಅವನ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಹಿಂಸಾಚಾರ ವಿರೋಧಿ ಭಾವನೆಯನ್ನು ಬೆಳೆಸಿಕೊಳ್ಳಲು ಸಲಹೆ ನೀಡಿತು. ಇದಕ್ಕಾಗಿ 10 ಬೇವು ಮತ್ತು ಅರಳಿ ಸಸಿಗಳನ್ನು ನೆಟ್ಟು ಪೋಷಿಸುವಂತೆ ನಿರ್ದೇಶನ ನೀಡಿದ ನ್ಯಾಯಾಲಯ ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ. ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ 2021ರಲ್ಲಿ ವಿಚಾರಣಾ ನ್ಯಾಯಾಲಯವು ಮಹೇಶ್ ಶರ್ಮಾ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಇದೀಗ ತನ್ನ ಜೀವಾವಧಿ ಶಿಕ್ಷೆಯನ್ನು ವಜಾಗೊಳಿಸುವಂತೆ ಮಹೇಶ್ ಶರ್ಮಾ ಮಧ್ಯಪ್ರದೇಶ ಹೈಕೋರ್ಟ್ ಮೊರೆ ಹೋಗಿದ್ದು, 50 ಸಾವಿರ ರೂ. ಬಾಂಡ್ ಮತ್ತು ಇಬ್ಬರು ಶ್ಯೂರಿಟಿಗಳನ್ನು ಒದಗಿಸಬೇಕು. ಅಗತ್ಯವಿದ್ದಾಗ ನ್ಯಾಯಾಲಯದ ರಿಜಿಸ್ಟ್ರಾರ್ ಮುಂದೆ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಆತನಿಗೆ ಜಾಮೀನು ನೀಡಿದೆ. ದಂಡ ಪಾವತಿ ಸೇರಿದಂತೆ ಮೇಲ್ಮನವಿ ಇತ್ಯರ್ಥವಾಗುವವರೆಗೆ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಲಾಗುತ್ತದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ನ್ಯಾಯಮೂರ್ತಿಗಳಾದ ಆನಂದ್ ಪಾಠಕ್ ಮತ್ತು ಪುಷ್ಪೇಂದ್ರ ಯಾದವ್ ಅವರ ವಿಭಾಗೀಯ ಪೀಠವು, ಹಿಂಸೆ ಮತ್ತು ದುಷ್ಟತನದ ಕಲ್ಪನೆಯನ್ನು ಸೃಷ್ಟಿ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸುವುದರಿಂದ ಎದುರಿಸಬಹುದು ಎಂದು ಅಭಿಪ್ರಾಯಪಟ್ಟಿದೆ. ಈ ಕುರಿತು ವಿಸ್ತಾರವಾಗಿ ವಿವರಿಸಿರುವ ನ್ಯಾಯಮೂರ್ತಿಗಳು, ಮಾನವ ಅಸ್ತಿತ್ವದ ಅಗತ್ಯ ಅಂಶಗಳಾಗಿ ಕರುಣೆ, ಸೇವೆ, ಪ್ರೀತಿ ಮತ್ತು ದಯೆಯ ಗುಣಗಳನ್ನು ಬೆಳೆಸುವ ಅವಶ್ಯಕತೆಯಿದೆ. ಯಾಕೆಂದರೆ ಇವು ಮೂಲಭೂತ ಮಾನವ ಪ್ರವೃತ್ತಿಗಳಾಗಿವೆ. ಜೀವವನ್ನು ಸಂರಕ್ಷಿಸಲು ಅವುಗಳನ್ನು ಪುನರುಜ್ಜೀವನಗೊಳಿಸಬೇಕು. ಈ ಪ್ರಯತ್ನವು ಕೇವಲ ಮರ ನೆಡುವ ಪ್ರಯತ್ನವಲ್ಲ, ಬದಲಾಗಿ ಒಂದು ಕಲ್ಪನೆಯ ಬೀಜವನ್ನು ಬಿತ್ತುವ ಪ್ರಯತ್ನವಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!