ಉದಯವಾಹಿನಿ, ಮೈಸೂರು: ಶೀಘ್ರವೇ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಸಹಕಾರ ಸಂಘ ಸ್ಥಾಪನೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜೆ.ಕೆ.ಮೈದಾನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಸರಾ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆ ಎಂದರೇ ಸ್ವಾವಲಂಬನೆಯ ಪ್ರತೀಕ. ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮಹಿಳೆಯರ ಬದುಕು ಸುಧಾರಣೆ ಕಂಡಿದೆ ಎಂದರು.
ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿ ಜೀವನವನ್ನು ಕಟ್ಟಿಕೊಡಬೇಕು. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು. ಮಹಿಳೆಯರು ಸ್ವಾವಲಂಬಿಯಾಗಿ ಜೀವಿಸಲು ಸಹಾಯ ಮಾಡಬೇಕು ಎಂಬ ಚಿಂತನೆಯನ್ನು ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಹಿಳೆಯರನ್ನು ಕೇಂದ್ರೀಕೃತವಾಗಿ ಇಟ್ಟುಕೊಂಡು ಈ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಕೋಟ್ಯಂತರ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ನುಡಿದರು.
ಮಹಿಳೆಯರಿಗೆ ಬ್ಯಾಂಕ್‌ಗಳಿಂದ ಸರಿಯಾಗಿ ಸಾಲ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ಅವರಿಗೆ ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳಲು ಕಷ್ಟವಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಸಹಕಾರ ಸಂಘ ಆರಂಭಿಸಲು ಚಿಂತನೆ ನಡೆಸಿದೆ. ಈ ಮೂಲಕ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ ಅವರನ್ನು ಸ್ವಾವಲಂಬಿಗಳಾಗಿ ಮಾಡಲಾಗುವುದು ಎಂದು ತಿಳಿಸಿದರು. ಮಹಿಳೆಯರ ಸ್ವಾಭಿಮಾನ, ಸಮೃದ್ಧಿ, ತಾಳ್ಮೆ, ಶಕ್ತಿಯ ಪ್ರತೀಕವೇ ದಸರಾ ಹಬ್ಬ. ನವ ದೇವಿಯ ಆರಾಧನೆ ಮಾಡಿ, ದುಷ್ಟರ ವಿರುದ್ಧ ಶಿಷ್ಟರ ರಕ್ಷಣೆ ಮಾಡುವ ದೇವಿಯ ಆರಾಧನೆ ಮಾಡುವುದೇ ವಿಜಯದಶಮಿ. ಇಡೀ ವಿಶ್ವಕ್ಕೆ ಸಂಸ್ಕೃತಿಯ ರುಚಿಯನ್ನು ಕೊಟ್ಟವರು ಮಹಿಳೆಯರು. ಹಿಂದೆ ರಾಜರು ಆಳ್ವಿಕೆ ಮಾಡುತ್ತಿದ್ದರು. ಆದರೆ ಈಗ ಸರ್ಕಾರ ಬಹಳ ವಿಜೃಂಭಣೆಯಿಂದ ದಸರಾ ಆಚರಿಸುತ್ತಾ ಬರುತ್ತಿದೆ ಎಂದರು.

Leave a Reply

Your email address will not be published. Required fields are marked *

error: Content is protected !!